ವಿಜಯಪುರ: ಸರಕು ಮತ್ತು ಸೇವಾ ತೆರಿಗೆ ಇಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ದಸರಾ ಹಾಗೂ ದೀಪಾವಳಿಯ ಬಂಪರ್ ಗಿಫ್ಟ್ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಂತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ತೆರಿಗೆ ನೀತಿ ಮಂಡಿಸಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ತೆರಿಗೆ ಭಾರ ತಗ್ಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಹತ್ತು ಹಲವು ಜನಪರ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ವಾವಲಂಬಿ ಭಾರತದ ಸಂಕಲ್ಪ, ವಿಕಸಿತ ಭಾರತದ ಯೋಜನೆಗಳನ್ನು ಸಾಕಾರಗೊಳಿಸಲು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ದೇಶದ ಜನ ಮುಂದಾಗಬೇಕಿದೆ. ಜನಸಾಮಾನ್ಯರಿಗೆ ‘ತೆರಿಗೆ ಹೊರೆ ಹೆಚ್ಚಿಸುವುದು ಆದ್ಯತೆಯಲ್ಲ, ಇಳಿಸುವುದು ನಮ್ಮ ಕಾಳಜಿ’ ಎಂದು ಪರಿಭಾವಿಸಿರುವ ಕೇಂದ್ರ ಸರ್ಕಾರಕ್ಕೆ ಜಿಲ್ಲೆ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೆ.
ದೇಶದ ರೈತರು, ಸಣ್ಣ ಮತ್ತು ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಯುವಕರು ಈ ಸುಧಾರಣೆಗಳಿಂದ ಪ್ರಯೋಜನ ಪಡೆಯುವುದರ ಜೊತೆಗೆ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ವ್ಯಾಪಾರ ಮಾಡುವುದು ಸುಲಭವಾಗುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸುವಂತಾಗುತ್ತದೆ. ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸುವುದು ಮತ್ತು ಸಣ್ಣ ವ್ಯವಹಾರಗಳಿಗೆ ವ್ಯಾಪಾರ ವಾತಾವರಣವನ್ನು ಸುಧಾರಿಸುವುದು ಈ ಸುಧಾರಣೆಗಳ ಉದ್ದೇಶವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.