ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಬಾ-ಅಲವಿ 
ಜಿಲ್ಲೆ

22ರಂದು ದಕ್ಷಿಣ ಕನ್ನಡ ಜಿಲ್ಲಾ ನೂತನ ಖಾಜಿ ಪದಗ್ರಹಣ

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಶೈಖುನಾ ಅಲ್ ಹಾಜ್ ತಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ಅವರನ್ನು ನೂತನ ಜಿಲ್ಲಾ ಖಾಜಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ಮಾಜಿ ಮೇಯರ್ ಕೆ. ಅಶ್ರಫ್ ಅವರು ತಿಳಿಸಿದ್ದಾರೆ.

ನೂತನ ಖಾಜಿಯವರ ಅಧಿಕಾರ ಸ್ವೀಕಾರ ಸಮಾರಂಭವು ಜು. 22ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರಿನ ಅನ್ಸಾರಿ ರಸ್ತೆಯಲ್ಲಿರುವ ರಿಝಾನತ್ ಭಕ್ಷ್ ಯತೀಂಖಾನ ಹಾಲ್‌ನಲ್ಲಿ ನಡೆಯಲಿದೆ ಎಂದರು.

1966ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್‌ನಲ್ಲಿ ಜನಿಸಿದ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ಬಾ-ಅಲವಿ ಅವರು ಪಾಣಕ್ಕಾಡ್ ಬಾ-ಅಲವಿ ಕುಟುಂಬದ ಪ್ರಮುಖ ವಾರಸುದಾರರಾಗಿದ್ದು, ಧಾರ್ಮಿಕ ಶಿಕ್ಷಣ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಸಾಮಾಜಿಕ ನಾಯಕತ್ವದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ.

ಸಾಂಪ್ರದಾಯಿಕ ದರ್ಸ್ ಶಿಕ್ಷಣದ ಮೂಲಕ ಇಸ್ಲಾಮಿಕ್ ಶಾಸ್ತ್ರಗಳಲ್ಲಿ ಆಳವಾದ ಪಾಂಡಿತ್ಯ ಗಳಿಸಿರುವ ಅವರು, 2009ರಿಂದ ಕೋಝಿಕ್ಕೋಡ್ ವಲಿಯ ಖಾಜಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ ಸುಮಾರು 370ಕ್ಕೂ ಅಧಿಕ ಮಹಲ್ಲ್ಗಳ ಖಾಜಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸುನ್ನಿ ಮಹಲ್ಲು ಫೆಡರೇಷನ್ ಮಲಪ್ಪುರಂ ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷರು, ಎಸ್‌ವೈಎಸ್ ಕೇರಳ ರಾಜ್ಯ ಸಮಿತಿ ಸದಸ್ಯರು ಹಾಗೂ ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ತಿರೂರಂಗಾಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸೈಯದುಲ್ ಉಮ್ಮ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್, ಶೈಖುನಾ ಉಸ್ತಾದ್ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಶೈಖುನಾ ಉಸ್ತಾದ್ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಅಧ್ಯಕ್ಷ ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಙಳ್ ಸೇರಿದಂತೆ ಸಮಸ್ತದ ಪ್ರಮುಖ ಉಲಮಾಗಳು, ವಿವಿಧ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ರಿಝಾನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಡಾ. ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್, ಹಾಜಿ ಅಬ್ಬು ಸಮದ್, ಮೊಹಮ್ಮದ್ ಅಶ್ರಫ್ ಹಳೆಮನೆ, ಮಕ್ಬೂಲ್ ಅಹ್ಮದ್, අಬ್ದು ಹಾಜಿ, ಐ. ಮೊಯ್ದಿನಬ್ಬ ಹಾಜಿ ಅವರು ಸುದ್ದಿಗೋಷ್ಠಿಯಲ್ಲಿದ್ದರು.