ಜಿಲ್ಲೆ

87 ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ

Davangere - Desk - Shobha Krishna Gowda

ಹೊನ್ನಾಳಿ: ಬಡವರ ಹಸಿವು ನೀಗಿಸುವ ಸದುದ್ದೇಶದಿಂದ ಈ ಹಿಂದೆ ಕಾಂಗ್ರೆಸ್ ಸರ್ಕಾರ, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿತ್ತು. ಇದರಿಂದ ಲಕ್ಷಾಂತರ ಬಡ ಕಾರ್ವಿುಕರ ಹಸಿವು ಮಾಯವಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಶ್ರೀ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಗುರುವಾರ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಕ್ಯಾಂಟೀನ್ ನಿರ್ವಣಕ್ಕೆ ಸ್ಥಳ ಸಿಕ್ಕಿರಲಿಲ್ಲ. ಹಿರೇಕಲ್ಮಠದ ಶ್ರೀಗಳ ಸಹಕಾರದಿಂದ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ನ್ಯಾಯಾಲಯ, ಆಸ್ಪತ್ರೆ ಹಾಗೂ ಕಾಲೇಜು ಇದೆ. ಅಲ್ಲದೆ ಕಾರ್ವಿುಕರು ಬರುತ್ತಾರೆ ಎಂದರು.

52 ಅಡಿ ಉದ್ದ, 45 ಅಡಿ ಅಗಲ ನಿವೇಶನದಲ್ಲಿ, 87 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರಿನ ಎಕ್ಸೆಲ್ ಪ್ರೀ ಕಾಸ್ಟ್ ಕಂಪನಿ ಅವರು ಕ್ಯಾಂಟೀನ್ ಕಟ್ಟಡ ಕಾಮಗಾರಿ ನಿರ್ವಿುಸಲಿದ್ದಾರೆ. ಇಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಕೆಲವೆಡೆ ಇಂದಿರಾ ಕ್ಯಾಂಟೀನ್ ಮುಚ್ಚಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲ ಕ್ಯಾಂಟೀನ್​ಗಳನ್ನು ಪುನರಾರಂಭಿಸಲು ಸೂಚನೆ ನೀಡಿದ್ದಾರೆ ಎಂದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ, ಹಸಿದವರಿಗೆ ಅನ್ನ ನೀಡುವ ಈ ಯೋಜನೆ ಎಲ್ಲ ಕಡು ಬಡಕಾರ್ವಿುಕರಿಗೆ ಅನುಕೂಲವಾಗಲಿದೆ ಎಂದರು.

ಪುರಸಭೆ ಅಧ್ಯಕ್ಷ ಮೈಲಪ್ಪ, ಪುರಸಭೆ ಸದಸ್ಯರಾದ ಬಾವಿಮನೆ ರಾಜಣ್ಣ, ಧರ್ಮಪ್ಪ, ರಾಜೇಂದ್ರ, ಪದ್ಮ್ಮಾ ಪ್ರಶಾಂತ್, ಮುಖ್ಯಾಧಿಕಾರಿ ಲೀಲಾವತಿ, ನಾಮ ನಿರ್ದೇಶಿತ ಸದಸ್ಯರಾದ ಚಂದ್ರಪ್ಪ, ರವಿ, ದೇವರಾಜ್, ವಿಜೇಂದ್ರಪ್ಪ, ಗಿರೀಶ್, ಪ್ರಶಾಂತ್ ಇದ್ದರು.