ಜಿಲ್ಲೆ

ನೂತನ ಸೇತುವೆ ಸೇವೆಗೆ ಸಮರ್ಪಣೆ

ಎ. ಆರ್. ರಘುರಾಮ

 ಪಾಂಡವಪುರ : ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್ ಬಳಿ ವಿಶ್ವೇಶ್ವರಯ್ಯ ನಾಲೆಗೆ ನಿರ್ಮಿಸಿರುವ ನೂತನ ಸೇತುವೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಂಗಳವಾರ ಉದ್ಘಾಟಿಸಿದರು. ಬಳಿಕ ಮಾತನಾಡಿ, ಪಾಂಡವಪುರದಿಂದ ಕೆ.ಆರ್.ಪೇಟೆ ಕಡೆಗೆ ತೆರಳುವ ಪ್ರಮುಖ ರಸ್ತೆಯಲ್ಲಿದ್ದ ಸೇತುವೆ ಶಿಥಿಗೊಂಡಿತ್ತು. ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ವಹಿಸುವ ಸಂದರ್ಭದಲ್ಲೇ ಸೇತುವೆ ನಿರ್ಮಾಣ ಮಾಡಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದರು. ಈ ಭಾಗದಲ್ಲಿ ಹ್ಯಾಂಡ್‌ಪೋಸ್ಟ್ ಪ್ರಮುಖ ವೃತ್ತವಾಗಿದೆ. ವಾಹನ ಸಂಚಾರ ಮತ್ತು ಜನದಟ್ಟಣೆಯೂ ಇದೆ. ಇಲ್ಲಿ ಬಸ್‌ನಿಲ್ದಾಣ ನಿರ್ಮಾಣ ಮಾಡಲು ಈ ಹಿಂದೆ ಸರ್ಕರದಿಂದ ಅನುದಾನ ಬಿಡುಗಡೆಯಾಗಿತ್ತು. ಆದರೆ ಸ್ಥಳದ ಸಮಸ್ಯೆಯಿಂದ ಅನುದಾನ ಹಿಂದಕ್ಕೆ ಹೋಗಿದೆ. ಮುಂಬರುವ ದಿನಗಳಲ್ಲಿ ಜಾಗದ ಸಮಸ್ಯೆ ಬಗೆಹರಿಸಿ, ಬಸ್ ನಿಲ್ದಾಣ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ: ನೂತನ ಸೇತುವೆಯೊಂದಿಗೆ ಹಳೆಯ ಸೇತುವೆ ಮೇಲೂ ವಾಹನ ಸಂಚಾರಕ್ಕೆ ಅವಕಾಶವಿರುತ್ತದೆ. ಇದರಿಂದ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಮುಖ ವೃತ್ತಗಳನ್ನು ಗುರುತಿಸಿ ಅಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸ ಲಾಗುವುದು ಎಂದು ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜು, ಡಾ. ಮಡಹಳ್ಳಿ ಸ್ವಾಮಿಗೌಡ, ಮುಖಂಡರಾದ ಹರವು ಪ್ರಕಾಶ್, ಎಲೆಕೆರೆ ಚಂದ್ರಣ್ಣ ಇತರರು ಇದ್ದರು.