ಕಂಪ್ಲಿ: ರಾಜ್ಯದ ಪ್ರಮುಖ 37 ಸೇತುವೆ ನಿರ್ಮಾಣ ಪಟ್ಟಿಯ ಮೊದಲ ಆದ್ಯತೆಯಲ್ಲಿ 18 ಸೇತುವೆಗಳಿದ್ದು, ಕಂಪ್ಲಿ ಕೋಟೆಯ ತುಂಗಭದ್ರಾ ನದಿ ಬ್ರಿಡ್ಜ್ ಸಹ ಸೇರಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕೋಟೆಯ ತುಂಗಭದ್ರಾ ನದಿ ಸೇತುವೆ ಶಿಥಿಲಗೊಂಡಿದ್ದು ಹೊಸದಾಗಿ ನಿರ್ಮಿಸಬೇಕಿದೆ. ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು.
ಈ ಭಾಗದ ಹಮಾಲಿ, ಗಿಗ್ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಸೇರಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ. ಬೇಗ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲ್ವೆ ಬ್ರಾಡ್‌ಗೇಜ್ ಸಂಪರ್ಕ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಕೇಂದ್ರದ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣಗೆ ಪತ್ರ ಬರೆಯುವುದಾಗಿ ತಿಳಿಸಿದರು.
ತಹಸೀಲ್ದಾರ್ ಶಿವರಾಜ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಜಿ.ಸುಶೀಲಮ್ಮ, ವೀರಾಂಜನೇಯಲು, ಬಿ.ನಾರಾಯಣಪ್ಪ, ಹಬೀಬ್ ರೆಹಮಾನ್, ಕೆ.ಮಸ್ತಾನ್‌ಸಾಬ್, ಎಂ.ಸುಧೀರ್ ಇತರರಿದ್ದರು.