ಉಡುಪಿ: ಹಂಗಾರಕಟ್ಟೆ-ಕೋಡಿಬೆಂಗ್ರೆಗೆ ಹೊಸ ಬಾರ್ಜ್ ಸೇವೆ ಆರಂಭಗೊಂಡಿದ್ದರಿಂದ ಮಲ್ಪೆ ಸಮೀಪದ ಕೋಡಿಬೆಂಗ್ರೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಬಿರುಸುಗೊಂಡಿದ್ದು, ಮುಂದಿನ ದಿನಗಳಲ್ಲಿ ಟೂರಿಸಂ ಹಾಟ್ಸ್ಪಾಟ್ ಆಗುವ ಲಕ್ಷಣ ಗೋಚರಿಸಿದೆ.
ಹಂಗಾರಕಟ್ಟೆ ಮತ್ತು ಕೋಡಿಬೆಂಗ್ರೆ ಮಧ್ಯೆ ದಶಕದಿಂದ ಕಾರ್ಯನಿರ್ವ ಹಿಸುತ್ತಿದ್ದ ಬಾರ್ಜ್ ಹಾಳಾಗಿ ಹಲವು ತಿಂಗಳಗಳ ಕಾಲ ಸಂಪರ್ಕವೇ ಕಡಿತವಾಗಿತ್ತು. ಇದರಿಂದ ಸ್ಥಳಿಯರೂ ಸಂಕಷ್ಟ ಎದುರಿಸುತ್ತಿದ್ದರು. ಇದೀಗ ಐದು ಕೋಟಿ ರೂ. ವೆಚ್ಚದಲ್ಲಿ ಮಧ್ಯಮಗಾತ್ರದ ಹೊಸ ಬಾರ್ಜ್ ಸೇವೆ ಕಾರ್ಯಾರಂಭ ಮಾಡಿದ್ದರಿಂದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಚುರುಕಾಗಿದೆ. ಕಳೆದ ಒಂದು ವರ್ಷಗಳಿಂದ ಬಾರ್ಜ್ ಇಲ್ಲದ ಕಾರಣ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ತೊಡಕಾಗಿತ್ತು. ಬಂದರು ಮತ್ತು ಮೀನುಗಾರಿಕೆ ಇಲಾಖೆ ಮೂಲಕ ನೂತನ ಸೇವೆ ಆರಂಭಗೊಂದ್ದು, ಹಂಗಾರಕಟ್ಟೆ ಮತ್ತು ಕೋಡಿಬೆಂಗ್ರೆ ಮಧ್ಯೆ ಓಡಾಟ ನಡೆಸುತ್ತಿದೆ.
10 ನಿಮಿಷದ ಪಯಣ
ಕೋಡಿಬೆಂಗ್ರೆ &ಹಂಗಾರಕಟ್ಟೆ ನಡುವೆ ಬಾರ್ಜ್ನಲ್ಲಿ ಸಂಚರಿಸುವುದೇ ಒಂದು ಅಪೂರ್ಣ ಅನುಭವವನ್ನು ನೀಡುತ್ತದೆ. ಒಂದು ಕಡೆ ಸಾಗರ ಸೇರುವ ನದಿಗಳು, ಸೂರ್ಯಾಸ್ತಮನದ ಸುಂದರ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಈ ಹಾದಿ ಕೇವಲ 10 ನಿಮಿಷಗಳ ಪಯಣ. ಕೋಡಿಬೆಂಗ್ರೆಯಿಂದ ಹಂಗಾರಕಟ್ಟೆಗೆ ಸುಮಾರು 700 ಮೀಟರ್ ದೂರವಿದೆ. ಬಾರ್ಜ್ ಇಲ್ಲದಿದ್ದರೆ ಕೋಡಿ ಬೆಂಗ್ರೆಯ ಜನ ಕೆಮ್ಮಣ್ಣು, ಸಂತೆಕಟ್ಟೆ, ಬ್ರಹ್ಮಾವರ ತಲುಪಿ ಅಲ್ಲಿಂದ ಐರೋಡಿ ಮೂಲಕ ಸುಮಾರು 30 ಕಿ.ಮೀ. ಸುತ್ತು ಬಳಸಿ ಹಂಗಾರಕಟ್ಟೆಗೆ ತಲುಪಬೇಕು.
ಕೋಡಿಬೆಂಗ್ರೆ ಟೂರಿಸಂ ಸ್ಪಾಟ್
ಕೋಡಿಬೆಂಗ್ರೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಮನಮೋಹಕ ಡೆಲ್ಟಾ ಬೀಚ್ ಎಲ್ಲರ ಗಮನ ಸೆಳೆಯುತ್ತಿದೆ.
ಕೋಡಿಬೆಂಗ್ರೆಗೆ ತಲುಪಲು ಹಂಗಾರಕಟ್ಟೆ ಬಹಳ ಹತ್ತಿರದ ಹಾದಿ. ಇದು ಸೀತಾ ನದಿ ಮತ್ತು ಸ್ವರ್ಣ ನದಿಯ ಸಂಗಮ ತಾಣ ಆಗಿರುವುದರಿಂದ ಪ್ರಯಣ ದೊಡ್ಡ ಸವಾಲಾಗಿದೆ. ಹೀಗಾಗಿ ಹಂಗಾರ ಕಟ್ಟೆಯಿಂದ ಕೋಡಿಬೆಂಗ್ರೆಗೆ ಹೋಗಲು ಬೋಟಿನ ಅವಶ್ಯಕತೆ ಇದೆ. ಹಂಗಾರಕಟ್ಟೆ ಬಂದರಿಗೆ ಅಭಿಮುಖವಾಗಿ ಇನ್ನೊಂದು ಪಾರ್ಶ್ವದಲ್ಲಿ ಅಳಿವೆಬಾಗಿಲು ಇದೆ. ನದಿ ಮತ್ತು ಸಮುದ್ರ ಸೇರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ದೋಣಿ ಪಯಣ ಕಷ್ಟ. ಹೀಗಾಗಿ ಬಾರ್ಜ್ ಸೇವೆ ದೋಣಿ ಪ್ರಯಾಣಕ್ಕಿಂತ ಸುರತ.
ಮಿನಿ ಬಸ್ ತೆರಳಲು ಅವಕಾಶ
ಹೊಸದಾಗಿ ಆರಂಭಗೊಂಡಿರುವ ಬಾರ್ಜ್ನಲ್ಲಿ ಆರು ಏಳು ಕಾರುಗಳು, ಸುಮಾರು ಹದಿನೈದು ಬೈಕ್ಗಳನ್ನು ಏಕಕಾಲದಲ್ಲಿ ಸಾಗಿಸಬಹುದಾಗಿದೆ. ಜತೆಗೆ ಮಿನಿ ಬಸ್ ಕೂಡ ತೆರಳಲು ಅವಕಾಶವಿದೆ. ಕುಂದಾಪುರ ಬ್ರಹ್ಮಾವರ ಕಡೆಯಿಂದ ಬರುವ ಪ್ರವಾಸಿಗರು ಬಾರ್ಜ್ ನಲ್ಲಿ ಹಂಗಾರಕಟ್ಟೆಯಿಂದ ಡೆಲ್ಟಾ ಪಾಯಿಂಟ್ಗೆ ಬಂದು ಸುವರ್ಣಾ ನದಿ, ಸೀತಾನದಿಯ ಸೊಗಬನ್ನು ಸವಿದು ಅಲ್ಲಿಂದ ಕೆಮ್ಮಣ್ಣು, ಹೂಡೆ ಮಾರ್ಗವಾಗಿ ಮಲ್ಪೆ ಉಡುಪಿ ಕಡೆಗೆ ಹೋಗಬಹುದು.