ಜಿಲ್ಲೆ

ಆಂಬ್ಯುಲೆನ್ಸ್ ಗಳ ಸುಗಮ ಸಂಚಾರಕ್ಕೆ ಹೊಸ ಆ್ಯಪ್: ಎಂ.ಎನ್.ಅನುಚೇತ್

ಬೆಂಗಳೂರು: ನಗರದಲ್ಲಿ ಆಂಬ್ಯುಲೆನ್ಸ್ ಗಳ ಸುಗಮ ಸಂಚಾರಕ್ಕೆ ಹೊಸ ಆ್ಯಪ್ ಸಿದ್ದಪಡಿಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಶೋಕನಗರದ ಬಾಲ್ಡ್‌ವಿನ್ ಬಾಲಕರ ಶಾಲೆಯ ಆಡಿಟೋರಿಯಂನಲ್ಲಿ ಶನಿವಾರ ನಡೆದ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೂರಾರು ಸಾರ್ವಜನಿಕರು, ನಗರದ ರಸ್ತೆಗಳಲ್ಲಿ ಸಾಕಷ್ಟು ಬಾರಿ ಆಂಬ್ಯುಲೆನ್ಸ್ಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಸಂಚಾರ ವಿಭಾಗದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಅನುಚೇತ್, ನಗರದಲ್ಲಿ ಸುಮಾರು ೩ ಸಾವಿರ ಆಂಬ್ಯುಲೆನ್ಸ್ ಗಳ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅವುಗಳ ಸುಗಮ ಸಂಚಾರಕ್ಕೆ ಪೂರಕವಾಗಿ ಹೊಸ ಆ್ಯಪ್ ಸಿದ್ಧಪಡಿಸಲು ಸಂಚಾರ ವಿಭಾಗ ಮುಂದಾಗಿದೆ. ಈ ಬಗ್ಗೆ ಆ್ಯಪ್ ಡೆವಲಪರ್‌ಗಳ ಜತೆಯೂ ಒಂದು ಸುತ್ತಿನ ಚರ್ಚೆ ನಡೆದಿದೆ. ಪ್ರಾಥಮಿಕವಾಗಿ ಆಂಬ್ಯುಲೆನ್ಸ್ಗಳು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಅದನ್ನು ಸಂಚಾರಿ ನಿರ್ವಾಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸಿ, ಸೂಕ್ತ ರಸ್ತೆಯನ್ನು ಸೂಚಿಸುವ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ ೬೦ ಸೆಕೆಂಡ್‌ಗೂ ಹೆಚ್ಚು ಕಾಲ ನಿಂತರೆ ಹಾಗೂ ಆಂಬ್ಯುಲೆನ್ಸ್ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ಸಂಚಾರ ದಟ್ಟಣೆ ಕಡಿಮೆ ಅಥವಾ ಸಿಗ್ನಲ್ ಫ್ರೀ ಮಾಡಲಾಗುತ್ತದೆ. ಹೀಗೆ ಹಲವಾರು ಅಂಶಗಳನ್ನು ಹೊಂದಿರುವ ಆ್ಯಪ್ ಸಿದ್ದಪಡಿಸಲು ಚಿಂತಿಸಲಾಗಿದೆ ಎಂದರು.
ಇನ್ನು ನಗರದ ೯೦೦ಕ್ಕೂ ಹೆಚ್ಚು ಜಂಕ್ಷನ್‌ಗಳಲ್ಲಿ ಸಂಚಾರ ಪೊಲೀಸರಿದ್ದು, ೪೦೦ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಲೈಟ್ ಮೂಲಕ ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ. ಸಿಬ್ಬಂದಿ ಕಾರ್ಯನಿರ್ವಹಿಸುವ ಜಂಕ್ಷನ್‌ಗಳಲ್ಲಿ ವೈರ್‌ಲೆಸ್ ಮೂಲಕ ಒಂದು ಸಿಗ್ನಲ್‌ನಿಂದ ಮತ್ತೊಂದು ಸಿಗ್ನಲ್‌ಗೆ ಮಾಹಿತಿ ನೀಡಿ, ಆಂಬ್ಯುಲೆನ್ಸ್ ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಶಾಲೆಗಳ ಬಳಿ ಸಿಬ್ಬಂದಿ ನಿಯೋಜಿಸಲಾಗುವುದು:
ನಗರದ ಶಾಲೆಗಳ ಬಳಿ ಸಂಚಾರ ಪೊಲೀಸರನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಸಾರ್ವಜನಿಕರು, ನಗರದ ಶಾಲೆಗಳಿರುವ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಾಗ ಮತ್ತು ಕರೆದೊಯ್ಯುವಾಗ ಪಾಲಕರು ರಸ್ತೆ ಬದಿಯೇ ವಾಹನ ನಿಲುಗಡೆ ಮಾಡುತ್ತಾರೆ. ಅದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ದೂರಿದರು.
ಅದಕ್ಕೆ ಉತ್ತರ ನೀಡಿದ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಅಂತಹ ಶಾಲೆಗಳ ಮಾಹಿತಿ ನೀಡಿದರೆ, ಅವುಗಳ ಬಳಿ ಸಂಚಾರ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಜತೆಗೆ ಶಾಲೆಗಳ ಆಡಳಿತ ಮಂಡಳಿಗೂ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದರು.
ಇನ್ನು ಶಾಂತಿನಗರ, ಲಾಲ್‌ಬಾಗ್ ರಸ್ತೆಗಳಲ್ಲಿ ಹೊಸೂರು ಕಡೆ ತೆರಳುವ ತಮಿಳುನಾಡು ಬಸ್‌ಗಳು ರಸ್ತೆ ಬದಿಯೇ ನಿಲ್ಲಿಸುತ್ತಾರೆ. ಬೇಗನೇ ಪೂರ್ಣಗೊಳ್ಳದ ಕಾಮಗಾರಿಗಳಿಂದಲೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಕೆಲ ಸಾರ್ವಜನಿಕರು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.