* ಕರ್ನಾಟಕ ಜಾನಪದ ಪರಿಷತ್‌ನ ಆಡಳಿತ ಮಂಡಳಿ ಸದಸ್ಯ ಡಾ.ವೇಮಗಲ್ ನಾರಾಯಣಸ್ವಾಮಿ ಸಲಹೆ
ರಾಮನಗರ
ವಿದ್ಯೆ ಕಲಿಸಿದ ಗುರು, ಜನ್ಮ ಕೊಟ್ಟ ತಂದೆ-ತಾಯಿ, ಅನ್ನ ಕೊಟ್ಟ ಅನ್ನದಾತರನ್ನು ಎಂದಿಗೂ ಮರೆಯಬಾರದು ಎಂದು ಕರ್ನಾಟಕ ಜಾನಪದ ಪರಿಷತ್‌ನ ಆಡಳಿತ ಮಂಡಳಿ ಸದಸ್ಯ ಡಾ.ವೇಮಗಲ್ ನಾರಾಯಣಸ್ವಾಮಿ ಹೇಳಿದರು.
ನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ಆಯೋಜಿಸುವ ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಲೋಕ ಸಾವಿರಾರು ಜಾನಪದ ಕಲಾವಿದರನ್ನು ಬೆಳೆಸಿ, ಗೌರವಿಸಿದೆ. ಇಂತಹ ಅಪರೂಪದ ಹಿರಿಯ ಕಲಾವಿದರನ್ನು ಸರ್ಕಾರ ಇದುವರೆಗೂ ಗುರುತಿಸದಿರುವುದು ಬೇಸರ ತರಿಸಿದೆ.ಮುಂದಿನ ದಿನಗಳಲ್ಲಿ ಇಂತಹ ಕಲಾವಿದರನ್ನು ಸರ್ಕಾರ ಗುರುತಿಸುವ ಕಾರ್ಯವನ್ನು ಪರಿಷತ್ತು ಮಾಡಲಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್‌ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ಕಲಾವಿದರಿಗೆ ಜಾನಪದ ಲೋಕದಲ್ಲಿ ಮೊದಲ ಗೌರವ, ಸನ್ಮಾನ ಹಾಗೂ ಆದ್ಯತೆ ಇರುತ್ತದೆ. ಜಾನಪದ ಕಲೆ, ಕಲಾವಿದರ ರಕ್ಷಣೆ ನಾಗೇಗೌಡರ ಮೂಲ ಉದ್ದೇಶವಾಗಿತ್ತು. ಜಾನಪದ ಸೊಬಗಿನ ಅನನ್ಯತೆಯನ್ನು ಉಳಿಸಿಕೊಂಡು ಬರುತ್ತಿರುವ ಸಮುದಾಯ ಲಂಬಾಣಿಗರು. ಈ ಸಮುದಾಯ ತಮ್ಮ ಕಷ್ಟ-ಸುಖಗಳ ಮಧ್ಯೆ ಕಲೆಮತ್ತು ರಂಗುರಂಗಿನ ವೇಷಭೂಷಣಗಳನ್ನು ಬಿಡದೆ ಉಳಿಸಿಕೊಂಡು ಬರುತ್ತಿದ್ದಾರೆ. ಭಾರತದ ಮೂಲ ಸಂಸ್ಕೃತಿಯನ್ನು ಪೋಷಿತ್ತಿರುವವರಲ್ಲಿ ಲಂಬಾಣಿಗರು ಪ್ರಮುಖರು ಎಂದರು.
ಗೌರವ ಸ್ವೀಕರಿಸಿ ಸಂವಾದದಲ್ಲಿ ಮಾತನಾಡಿದ ಲಂಬಾಣಿ ಗಾಯನ ಮತ್ತು ನೃತ್ಯ ಕಲಾವಿದೆ ರಮಾಬಾಯಿ, ತಮ್ಮ ಬದುಕಿನ ಕಷ್ಟಸುಖಗಳನ್ನು ಹಂಚಿಕೊಂಡರು. ತಲೆಯ ಮೇಲೆ ಅಲಂಕೃತ ಕೊಡಗಳನ್ನು ಹೊತ್ತು ಮಾಡಿದ ಗೂಮರ್ ನೃತ್ಯ ಪ್ರದರ್ಶನ ನೋಡುಗರ ಮನಸೆಳೆಯಿತು. ಮದು ಮಗಳನ್ನು ಗಂಡನ ಮನೆಗೆ ಬೀಳ್ಕೊಡುವ ಹವೇಲಿ ಹಾಡು, ಮದುವೆ ಪದ, ಡಾವಲೋ ಹಾಡು, ದೀಪಾವಳಿಯಲ್ಲಿ ಹಿರಿಯರ ಹಾರೈಕೆಯ ಗೀತೆಗಳನ್ನು ಹಾಡಿದರು. ತಮಟೆ ಕುಣಿತವಂತು ಸೊಗಸಿನಿಂದ ಕೂಡಿತ್ತು. ಲಲಿತ ಲೋಕೇಶ್ ಪವಾರ್, ಶ್ಯಾರುಬಾಯಿ, ಪಾರುಬಾಯಿ, ಪುತ್ಥಳಬಾಯಿ, ಶೇಬಾಯಿ, ಗುರುಬಾಯಿಯರ ನೃತ್ಯ ವೈಭವ ಪೂರ್ಣವಾಗಿತ್ತು. ನಾರಾಯಣ ರಾಥೋಡ್ ತಮಟೆ ನುಡಿಸಿದರು.
ಇದೇ ವೇಳೆ ಪರಿಷತ್ತಿನ ತುಮಕೂರು ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮೋಹನ್ ಕುಮಾರ್ ಅವರನ್ನು ಗೌರಸಲಾಯಿತು. ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತಾ.ರಾಮೇಗೌಡ, ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಕ್ಯೂರೇಟರ್ ಡಾ. ರವಿ ಯು.ಎಂ, ರಂಗಸಹಾಯಕ ಪ್ರದೀಪ್, ಪ್ರೊ. ಹೇಮಾನಾಯ್ಕ, ಡಾ.ವೀರಾನಾಯ್ಕ, ಡಾ.ನಾಗರಾಜನಾಯ್ಕ, ಸಾಹಿತಿಗಳಾದ ಡಾ.ವಿಜಯ ರಾಂಪುರ, ರಾಜು ಪವಾರ್, ಚಿಕ್ಕಿರಾನಾಯ್ಕ ಹಾಗೂ ಜಾನಪದ ಲೋಕದ ಸಿಬ್ಬಂದಿ ಇದ್ದರು.