ಜಿಲ್ಲೆ

ಬಿಎಸ್ಸೆನ್ನೆಲ್ ಟವರ್‌ಗಳಲ್ಲಿ ನೆಟ್ವರ್ಕ್ ಸಮಸ್ಯೆ

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಕುಂದಾಪುರ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಹೊಸದಾಗಿ ಸೋಲಾರ್ ಅಳವಡಿಸಿದ ಬಿಎಸ್‌ಎನ್‌ಎಲ್ ಟವರ್‌ಗಳು ಮಳೆಗಾಲದಲ್ಲಿ ಕೈಕೊಡುತ್ತಿದ್ದು, ಇದರಿಂದ ನಿತ್ಯವೂ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲೆಯ 50ಕ್ಕೂ ಹೆಚ್ಚು ಟವರ್‌ಗಳಲ್ಲಿ ಈ ಸಮಸ್ಯೆಯಿದ್ದು, ಇದರಿಂದ ಗ್ರಾಮೀಣ ಭಾಗದ ಜನರು ಹೈರಾಣಾಗುವಂತೆ ಮಾಡಿದೆ. ಕಳೆದ ಹಲವಾರು ದಿನಗಳಿಂದ ಸರಿಯಾಗಿ ನೆಟ್ವರ್ಕ್ ಸಿಗದಂತಾಗಿದೆ. ಬ್ಯಾಟರಿ ಕೊರತೆ, ನಿರ್ವಹಣೆ ಸಮಸ್ಯೆ, ಕಳಪೆ ಗುಣಮಟ್ಟದ ಬ್ಯಾಟರಿ ಅಳವಡಿಕೆ, ಗುತ್ತಿಗೆದಾರರ ಸಮಸ್ಯೆ, ಪರ್ಯಾಯವಾಗಿ ಜನರೇಟರ್ ವ್ಯವಸ್ಥೆ ಇಲ್ಲದಿರುವ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕುಂದಾಪುರ, ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲೆಯ ಬಹುತೇಕ ಹೊಸ ಬಿಎಸ್ಸೆನ್ನೆಲ್ ಟವರ್‌ಗಳು ಮಳೆಗಾಲದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ದೂರಿಗೆ ಸ್ಪಂದನೆ ಇಲ್ಲ

ಎಲ್ಲೆಲ್ಲಿ ಹೊಸದಾಗಿ ಟವರ್‌ಗಳಿಗೆ ಸೋಲಾರ್ ಅಳವಡಿಸಿದ್ದಾರೆಯೋ ಅಲ್ಲೆಲ್ಲ ಕಳೆದ 8-10 ದಿನಗಳಿಂದ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ. ಈ ಬಗ್ಗೆ ಗ್ರಾಮೀಣ ಭಾಗದ ಜನರು ಸಂಬಂಧಪಟ್ಟ ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲವರು ಕರೆ ಸ್ವೀಕರಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಜನರು ಆರೋಪಿಸುತ್ತಾರೆ. ಕಮಲಶಿಲೆ ಗ್ರಾಮದ ಯಳಬೇರಿನಲ್ಲಿ ಬಹಳ ಬೇಡಿಕೆ ಬಳಿಕ ಟವರ್ ನಿರ್ಮಿಸಿ ಚಾಲನೆ ನೀಡಲಾಗಿದೆ. ಆದರೆ ಮಳೆ ಶುರುವಾದ ನಂತರ ಕಳೆದ 8 ದಿನದಿಂದ ನೆಟ್ವರ್ಕ್ ಇಲ್ಲ. ಕೇಳಿದರೆ ಚಾರ್ಜ್ ಇಲ್ಲ, ವಿದ್ಯುತ್ ಸಂಪರ್ಕ ಇಲ್ಲ ಎನ್ನುತ್ತಾರೆ. ಯಳಬೇರಿನ ಈ ಪರಿಸರದಲ್ಲಿ 70 ಮನೆಗಳಿವೆ. ಮೊಬೈಲ್ ಕರೆ ಮಾಡಬೇಕಾದರೆ ಇಲ್ಲಿನ ಜನ 4 ಕಿ.ಮೀ. ದೂರದ ಆಜ್ರಿಗೆ ಹೋಗಬೇಕು ಎಂದು ಗ್ರಾಮಸ್ಥರಾದ ಆದರ್ಶ ಶೆಟ್ಟಿ ಅಳಲು ತೋಡಿಕೊಂಡಿದ್ದಾರೆ.

ಸೋಲಾರ್ ಚಾಲಿತ ಟವರ್‌ಗಳಿಂದ ಸಮಸ್ಯೆ

ಉಡುಪಿ ಜಿಲ್ಲೆಯಲ್ಲಿ 196 ಹಳೇ ಟವರ್‌ಗಳಿದ್ದು, 111 ಟವರ್ 4ಜಿಗೆ ಅಪ್‌ಡೇಟ್ ಮಾಡಲಾಗಿದೆ. ಇನ್ನು 73 ಟವರ್‌ಗಳಿಗೆ ಬ್ಯಾಟರಿಯೇ ಇಲ್ಲ. ಇದರಿಂದ ಕರೆಂಟ್ ಹೋದಾಗ ನೆಟ್‌ವರ್ಕ್ ಇರುವುದಿಲ್ಲ. ಇವುಗಳ ಪೈಕಿ 10ಕ್ಕೆ ಬ್ಯಾಕ್‌ಅಪ್ ಅಳವಡಿಸಲಾಗಿದೆ. ಇನ್ನು 63 ಕಡೆ ಬ್ಯಾಟರಿ ಅಗತ್ಯವಿದೆ. ಇನ್ನು ಹೊಸದಾಗಿ ನಿರ್ಮಿಸಿರುವ ಸೋಲಾರ್ ಚಾಲಿತ ಟವರ್‌ಗಳಿಗೂ ಕಳಪೆ ಗುಣಮಟ್ಟದ ಬ್ಯಾಕ್ ಅಪ್ ಅಳವಡಿಸಿದ್ದರಿಂದ ಅವುಗಳು ಸಹ ಮಳೆಗಾಲದಲ್ಲಿ ಕೆಲಸ ಮಾಡುತ್ತಿಲ್ಲ. ಕುಂದಾಪುರದಲ್ಲಿ ಹೊಸದಾಗಿ 20 ಹಾಗೂ ಬೈಂದೂರಲ್ಲಿ ಹೊಸದಾಗಿ 23 ಟವರ್‌ಗಳು ಆರಂಭಗೊಂಡಿವೆ. ಮಳೆಗೆ ಎಲ್ಲೆಡೆ ಇದೇ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿವೆ. ಅದರಲ್ಲೂ ಮಡಾಮಕ್ಕಿ, ಕಮಲಶಿಲೆಯ ಯಳಬೇರು, ಹಳ್ಳಿಹೊಳೆಯ ಇರಿಗೆ, ಕುಂದಲಬೈಲು, ಕೆರಾಡಿಯ ಕಾರಿಬೈಲು, ಹೊಸೂರು ಸಹಿತ ಹಲವೆಡೆಗಳಲ್ಲಿ ವಾರದಿಂದ ನೆಟ್ವರ್ಕ್ ಇಲ್ಲದಂತಾಗಿದೆ.

ಸೋಲಾರ್ ಅಳವಡಿಸಿದ ಬಿಎಸ್ಸೆನ್ನೆಲ್ ಟವರ್‌ಗಳಲ್ಲಿ ಬ್ಯಾಟರಿ ಅಥವಾ ಜನರೇಟರ್ ವ್ಯವಸ್ಥೆ ಇರಬೇಕು. ಆದರೆ ನಮ್ಮಲ್ಲಿ ಕೆಲವೆಡೆಗಳಲ್ಲಿ ಆ ವ್ಯವಸ್ಥೆ ಇಲ್ಲ. ಬ್ಯಾಟರಿಗಳ ಕೊರತೆಯಿದೆ. ಸಿಬ್ಬಂದಿ ಕೊರತೆಯಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಈ ರೀತಿಯ ಸಮಸ್ಯೆ ಇದೆಯೋ ಅಲ್ಲೆಲ್ಲ ಟವರ್ ನಿರ್ವಹಣೆ ಹೊಣೆಯನ್ನು ಗ್ರಾ.ಪಂ.ಗೆ ವಹಿಸಿಕೊಡುವಂತೆ, ನಿರ್ವಹಣೆಗಾಗಿ 30 ಸಾವಿರ ರೂ. ನೀಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕಲ್ಲಿ, ಈ ಸಮಸ್ಯೆ ಬಗೆಹರಿಯಲಿದೆ. ಕೋಟ ಶ್ರೀನಿವಾಸ ಪೂಜಾರಿ, ಸಂಸದರು.