ಜಿಲ್ಲೆ

ನೇತ್ರಾವತಿ ಮಹಿಳಾ ಮಂಡಳ ವಾರ್ಷಿಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಪ್ರಸ್ತುತ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆ, ಸವಾಲುಗಳಿಗೆ ಪರಿಹಾರವು ಮಹಿಳೆಯರಿಂದಲೇ ಸಾಧ್ಯ ಮತ್ತು ಸದೃಢ ಸುಂದರ ಸಮಾಜ ನಿರ್ಮಾಣದಲ್ಲಿ ಸ್ತ್ರೀಯ ಪಾತ್ರ ಅತ್ಯಂತ ಮಹತ್ವದ್ದು ಎಂದು ಸಮಾಜ ಸೇವಕಿ ಭಾರತಿ ನಂದಕುಮಾರ ಹೇಳಿದರು.

ಇಲ್ಲಿಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೇತ್ರಾವತಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.

ನೇತ್ರಾವತಿ ಮಹಿಳಾ ಮಂಡಳ ಆಯೋಜಿಸುವ ಕಾರ್ಯಕ್ರಮಗಳು ಬಹಳ ವಿಭಿನ್ನ ಶೈಲಿಯ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆ ಆಚರಣೆಯನ್ನು ಬಿಂಬಿಸುವ ಪ್ರಯತ್ನ ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮಂಡಳದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೇತ್ರಾವತಿ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಸೋಮೇಶ್ವರ ಮಾತನಾಡಿ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದವರು ಮಂಡಳದ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಅತಿಥಿಗಳಾಗಿದ್ದ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ ಮಾತನಾಡಿ, ಸೇವಾ ಭಾರತಿ, ಅದಮ್ಯ ಚೇತನ, ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಭಾರತಿ ನಂದಕುಮಾರ ಅವರು ಮಹಿಳೆಗೆ ಅವಕಾಶ ಸಿಕ್ಕರೆ ಎಷ್ಟೊಂದು ಕೆಲಸ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ವಾದಿರಾಜ ಭಟ್ ಮಾತನಾಡಿದರು. ನೇತ್ರಾವತಿ ಮಹಿಳಾ ಮಂಡಳದ ಕಾರ್ಯದರ್ಶಿ ಶಶಿಮಂಗಳ ಐತಾಳ, ಉಪಾಧ್ಯಕ್ಷೆ ಉಷಾ ಇಂದ್ರಾಳಿ, ಕೋಶಾಧ್ಯಕ್ಷೆ ರಂಜನಿ ಕೋಟೇಶ್ವರ, ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಅನಂತರಾಜ್ ಭಟ್, ಭಾರ್ಗವ ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ಮಂಡಳ ಸದಸ್ಯರಿಂದ ಉತ್ತಮ ಸಂದೇಶ ಸಾರುವ ನಾಟಕ ಪ್ರದರ್ಶನ ನಡೆಯಿತು. ವಿದುಷಿ ಸೀಮಾ ಉಪಾಧ್ಯಾಯ ನಿರೂಪಿಸಿದರು.