ಅಪಾಯದ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿರುವ ನೇತ್ರಾವತಿ ನದಿ. 
ಜಿಲ್ಲೆ

ಉಪ್ಪಿನಂಗಡಿಯಲ್ಲಿ ನದಿಮಟ್ಟ ಏರಿಳಿತ

ಸೌಮ್ಯ ಆರ್

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ ಹರಿದು ನೆರೆ ಭೀತಿ ಮೂಡಿಸಿದ್ದ ನೇತ್ರಾವತಿ-ಕುಮಾರಧಾರಾ ನದಿಗಳು ಏರಿದಷ್ಟೇ ವೇಗದಲ್ಲಿ ಇಳಿಕೆ ಕಂಡು ಬುಧವಾರ ಮುಂಜಾನೆ ಅಪಾಯದ ಮಟ್ಟಕ್ಕಿಂತ 4 ಮೀಟರ್ ಕೆಳಗೆ ಹರಿಯತೊಡಗಿತ್ತು.

ಮಂಗಳವಾರ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯ ಸುತ್ತುವರಿದು ಸಂಗಮವಾಗಿ ಮತ್ತೆ ರಥಬೀದಿ, ಇಂದ್ರಪ್ರಸ್ಥ ಶಾಲೆ ಬಳಿಯ ರಸ್ತೆಯಲ್ಲಿ ಯೂನಿಯನ್ ಬ್ಯಾಂಕ್ ತನಕ ನೆರೆ ನೀರು ಹರಿದು ಬಂದಿತ್ತು. ಉಪ್ಪಿನಂಗಡಿಯ ಮಾದರಿ ಶಾಲಾ ಆವರಣವನ್ನು ಆವರಿಸಿ ಬಂದಿದ್ದ ನೆರೆ ನೀರು ಪರಿಸರದ ತಗ್ಗು ಪ್ರದೇಶಗಳಾದ ಮಠ, ಹಳೆಗೇಟು, ಪಂಜಳ, ನಟ್ಟಿಬೈಲು ಮುಂತಾದ ಪ್ರದೇಶಗಳನ್ನೂ ಜಲಾವೃತಗೊಳಿಸಿತ್ತು. ನೆರೆ ವ್ಯಾಪಿಸಬಹುದೆಂಬ ಭೀತಿಯಿಂದ ಎಲ್ಲೆಡೆ ಸ್ಥಳಾಂತರ ಪ್ರಕ್ರಿಯೆ ಭರದಿಂದ ನಡೆಯುತ್ತಿದ್ದಂತೆಯೇ ತಡರಾತ್ರಿ ವೇಳೆ ನದಿ ನೀರು ಇಳಿಮುಖವಾಗತೊಡಗಿತು.

ಭಕ್ತಾದಿಗಳಿಂದ ಸ್ವಚ್ಛತೆ

ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಆವರಣದಲ್ಲಿ ನೆರೆ ಬಂದು ಇಳಿದ ಬಳಿಕ ಕೆಸರಿನ ರಾಶಿ ತುಂಬಿಕೊಂಡಿದ್ದು, ಸ್ವಚ್ಛತಾ ಕಾರ್ಯ ನಡೆಯಿತು. ಕಾಂಗ್ರೆಸ್ ಮುಖಂಡರಾದ ಪಂಜಿಗುಡ್ಡೆ ಈಶ್ವರ ಭಟ್ 30 ಜನರ ತಂಡದೊಂದಿಗೆ ದೇವಾಲಯಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಇವರೊಂದಿಗೆ ಸ್ಥಳೀಯ ಭಕ್ತರು ಕೈಜೋಡಿಸಿದರು.

ಮತ್ತೆ ಏರಿಕೆ ಕಂಡ ನೇತ್ರಾವತಿ

ಬುಧವಾರ ಸಾಯಂಕಾಲದಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯಲಾರಂಭಿಸಿ ನದಿ ನೀರಿನ ಮಟ್ಟದಲ್ಲೂ ಹೆಚ್ಚಳ ಕಂಡು ಬಂದಿತ್ತು. 27.7 ಮೀಟರ್‌ನಲ್ಲಿದ್ದ ನೀರಿನ ಮಟ್ಟವು ರಾತ್ರಿಯಾಗುತ್ತಿದ್ದಂತೆಯೇ 28.01ಕ್ಕೆ ಬಂದು ನಿಂತಿತ್ತು. ತನ್ಮೂಲಕ ನೆರೆಯ ಭೀತಿಯನ್ನು ಮತ್ತೆ ಜೀವಂತವಿರಿಸಿದೆ.