ಜಿಲ್ಲೆ

ದೇಶಕ್ಕೆ ನೇತಾಜಿ ಕೊಡುಗೆ ಅಮೂಲ್ಯ ; ಬೆರಳಚ್ಚು ತಜ್ಞ ವಂದೇಮಾತರಂ ಸೋಮಶಂಕರ್ ಹೇಳಿಕೆ

Kolar

ಕೋಲಾರ : ದೇಶಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ನೀಡಿರುವ ಅಮೂಲ್ಯ ಕೊಡುಗೆ ಹಾಗೂ ಅವರ ಪರಾಕ್ರಮವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಬೆರಳಚ್ಚು ತಜ್ಞ ವಂದೇಮಾತರಂ ಸೋಮಶಂಕರ್ ಹೇಳಿದರು.

ನಗರದ ಗಾಂಧಿವನದ ಬಳಿ ಯುವಾ ಬ್ರಿಗೇಡ್ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಜೈ ಹಿಂದ್ ರನ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ನೇತಾಜಿ ರೀತಿಯಲ್ಲಿಯೇ ಇನ್ನು ಮುಂದೆ ನಾವೆಲ್ಲ ಪರಸ್ಪರ ಭೇಟಿಯಾದಾಗ ನಮಸ್ಕಾರ ಬದಲು ಜೈ ಹಿಂದ್ ಎಂದು ವಾಚಿಸಬೇಕು ಎಂದು ಕೋರಿದರು.

ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ನ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರ ಪರಾಕ್ರಮ ತಿಳಿಯುತ್ತಾ ಹೋದಂತೆ ದೇಶಭಕ್ತಿ, ಸಾಹಸದ ಭಾವನೆ ತುಂಬಿಕೊಳ್ಳುತ್ತದೆ. ವಿಪತ್ತುಗಳನ್ನು ಎದುರಿಸುವ ಸಂಬಂಧ ಪ್ರೇರಣಾದಾಯಕ ಅಂಶಗಳನ್ನು ನೇತಾಜಿ ಅವರ ಜೀವನದ ಸಾಹಸಗಾಥೆಗಳಿಂದ ತಿಳಿದುಕೊಳ್ಳಬಹುದು. ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಮಾತನಾಡಿದರೆ ಇಡೀ ಭಾರತದ ಬಗ್ಗೆ ಮಾತನಾಡಿದಂತೆ ಎಂದರು.

ದೇಶದ ಮೊದಲ ಸೈನ್ಯ ಕಟ್ಟಿದ ಖ್ಯಾತಿ ನೇತಾಜಿಯವರಿಗೆ ಸಲ್ಲುತ್ತದೆ. ಅವರಲ್ಲಿದ್ದ ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಮಾದರಿ. ಅವರ ಕನಸುಗಳನ್ನು ಸಾಕರಗೊಳಿಸಲು ಯುವ ಸಮುದಾಯ ಮುಂದಾಗಬೇಕೆಂದು ಯುವಾ ಬ್ರಿಗೇಡ್ ಸದಸ್ಯರು ಕೋರಿದರು. ನಗರದ ಗಾಂಧಿವನದಿಂದ ಪ್ರಾರಂಭವಾದ ಜೈ ಹಿಂದ್ ರನ್ ಕಾಲ್ನಡಿಗೆ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನೇತಾಜಿಯ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ನಗರಠಾಣೆ ನಿರೀಕ್ಷಿಕ ಅಣ್ಣಯ್ಯ, ಜಿಲ್ಲಾ ಮಾಜಿ ಯೋಧರ ಟ್ರಸ್ಟಿನ ಅಧ್ಯಕ್ಷ ಜಗನ್ನಾಥ್, ಮಾಜಿ ಸೈನಿಕರಾದ ರಾಜಣ್ಣ, ಕೃಷ್ಣೇಗೌಡ, ಮಂಜುನಾಥ್, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಸಂಚಾಲಕ ಮಹೇಶ್‌ರಾವ್ ಕದಂ, ಯುವಾ ಬ್ರಿಗೇಡ್ ಕಾರ್ಯಕರ್ತ ಹಾಗೂ ಬಜರಂಗದಳದ ಜಿಲ್ಲಾ ಸಂಚಾಲಕ ಬಾಬು, ಕುಡಾ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಇತರರು ಇದ್ದರು.