ಜಿಲ್ಲೆ

ಎನ್‌ಇಪಿ ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರಿ

ಹರ್ಷ ನ.ಪುರೋಹಿತ

ಹಿರಿಯೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ, ಸಂಶೋಧನೆಗಳಿಗೆ ಪೂರಕವಾಗಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಪ್ರಾಚಾರ್ಯ ಡ್ಯಾನಿಯಲ್ ರತನ್ ಕುಮಾರ್ ಹೇಳಿದರು.

ತಾಲೂಕಿನ ಉಡುವಳ್ಳಿ ನವೋದಯ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 3ನೇ ವರ್ಷದ ಸಂಭ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

34 ವರ್ಷದ ನಂತರ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ತಿದ್ದುಪಡಿ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯ ಚಹರೆಯನ್ನು ಸಮಗ್ರವಾಗಿ ಬದಲಾಯಿಸುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದು ಜುಲೈ 29ಕ್ಕೆ ಮೂರು ವರ್ಷ ಪೂರ್ಣಗೊಂಡಿದೆ ಎಂದರು.

ಗುಣಮಟ್ಟದ ಶಿಕ್ಷಣ, ಶಾಲಾ ಹಂತದಲ್ಲಿ ಕೌಶಲ ಅಭಿವೃದ್ಧಿ, ಕಲಿಕ ಚಟುವಟಿಕೆಯ ಚಿತ್ರಣವನ್ನೇ ಬದಲಾಯಿಸಲು, ಶಿಕ್ಷಣವನ್ನು ಸಮಗ್ರವಾಗಿಸಿ ಸ್ವಾವಲಂಬಿ ಭಾರತ ಕಟ್ಟಲು, ಸುಭದ್ರ ಅಡಿಪಾಯ ಹಾಕಲು, ಆತ್ಮ ನಿರ್ಭರ್ ಭಾರತ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಶಿಕ್ಷಕರನ್ನು ಸನ್ನದ್ಧಗೊಳಿಸಲಾಗಿದೆ. ನಿರಂತರ ತರಬೇತಿಗಳನ್ನು ನೀಡಲಾಗುತ್ತಿದೆ. ಭಾಷೆ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ವೃತ್ತಿ ತರಬೇತಿಯನ್ನು ಸಹ ಶಿಕ್ಷಣದ ಹಂತದಲ್ಲಿ ನೀಡಲು ಅವಕಾಶವಿದ್ದು, ಉಡುವಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಬಡಗಿ ವೃತ್ತಿಯನ್ನು ಮಕ್ಕಳಲಿಗೆ ಕಲಿಸಲು ಪ್ರಯತ್ನಿಸಲಾಗುವುದು ಎಂದರು.

ಈಗ ಸದ್ಯ ವಿದ್ಯಾಲಯದಲ್ಲಿ 239 ವಿದ್ಯರ್ಥಿಗಳು ಹಾಗೂ 195 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 23 ಬೋಧಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6 ರಿಂದ 12 ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಉಪ ಪ್ರಾಂಶುಪಾಲೆ ಶ್ರೀಮತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಚಟುವಟಿಕೆಗೆ ಉಪಯುಕ್ತ ಬೋಧನೆ, ಕೌಶಲಾಭಿವೃದ್ಧಿ ಶಿಕ್ಷಣ ನೀಡುವಂತಾಗಬೇಕು ಎಂಬುದು ಎನ್‌ಇಪಿ ಮುಖ್ಯ ಆಶಯ ಎಂದರು.

ಹಿರಿಯೂರಿನ ಗಂಗಾ ಸೆಂಟ್ರಲ್ ಶಾಲೆ ಮುಖ್ಯಶಿಕ್ಷಕಿ ಶೈಲಜಾ ಮಾತನಾಡಿ, ನೂತನ ಶಿಕ್ಷಣ ನೀತಿ, 21ನೇ ಶತಮಾನದ ತಂತ್ರಜ್ಞಾನ-ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಜ್ಜುಗೊಳಿಸುವುದು ಸೇರಿ ಮಹತ್ವದ ಧ್ಯೇಯೋದ್ದೇಶಗಳನ್ನು ಹೊಂದಿದೆ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ವೇಣುಗೋಪಾಲ್ ಮಾತನಾಡಿದರು. ಶಿಕ್ಷಕರಾದ ಆಂಟೋನಿ ಸ್ಟ್ಯಾನ್ಲಿ, ರೇಣುರಾಯ್ ಇತರರಿದ್ದರು.