ಜಿಲ್ಲೆ

ಎಸ್​ಇಪಿ ಜಾರಿಗೆ ಎಸ್​.ವಿ. ಸಂಕನೂರು ವಿರೋಧ! ರಾಜೀವ್​ ಗಾಂಧಿ ನಿರ್ಧಾರದ ವಿರುದ್ಧ ಕಾಂಗ್ರೆಸ್​ ನಡೆ: ಎಸ್​.ವಿ. ಸಂಕನೂರು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನ ವಿಚಾರದಲ್ಲಿ ತಮ್ಮದೇ ಪಕ್ಷದ ದಿ. ರಾಜೀವ್​ ಗಾಂಧಿ ಅವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಎನ್​ಇಪಿ ಬದಲು ಎಸ್​ಇಪಿ ಜಾರಿಗೆ ತರುತ್ತಿದ್ದೇವೆ ಎಂಬುದನ್ನು ಅವರು ಬಹಿರಂಗವಾಗಿ ತಿಳಿಸಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಆಗ್ರಹಿಸಿದರು.
ಪತ್ರಿಕಾಬವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಮೂರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗಳು ಜಾರಿಗೊಂಡಿವೆ. 1968 ಮತ್ತು 1986ರ ಶಿಕ್ಷಣ ನೀತಿಗಳನ್ನು ಎಲ್ಲ ರಾಜ್ಯಗಳು ಯಥಾವತ್ತಾಗಿ ಜಾರಿಗೊಳಿಸಿವೆ. ಆದರೆ, 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಆಗಿದೆ ಅಥವಾ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂಬ ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ವಿರೋಧ ಮಾಡಲಾಗುತ್ತಿದೆ' ಎಂದು ಸಂಕನೂರು ಆರೋಪಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ ಭಾಷಣದಲ್ಲಿ "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಮ್ಮ ದೇಶದಲ್ಲಿ ಬಹು ಧರ್ಮ, ಬಹು ಭಾಷೆ, ಬಹು ಸಂಸತಿಗಳು ಇರುವುದರಿಂದ ಏಕರೂಪ ಶಿಕ್ಷಣ ನೀತಿ ಹೊಂದುವುದಿಲ್ಲ ಎಂಬ ಕಾರಣವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ, ಈ ಹಿಂದೆ ರಾಜೀವ್​ ಗಾಂಧಿ ಅವರು ನೀಡಿದ ಏಕರೂಪ ಶಿಕ್ಷಣ ನೀತಿಯನ್ನು ಒಪ್ಪಿಕೊಂಡಿದ್ದು ಯಾಕೆ?ಎಂದು ಪ್ರಶ್ನಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ(ಎನ್​ಇಪಿ) ನೀತಿ ಬದಲು ರಾಜ್ಯ ಶಿಕ್ಷಣ ನೀತಿ(ಎಸ್​ಇಪಿ) ಅನುಷ್ಠಾನವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ. ಎನ್​ಇಪಿಯಲ್ಲಿರುವ ಲೋಪದೋಷಗಳೇನು ಎಂಬುದರ ಬಗ್ಗೆ ಕಾಂಗ್ರೆಸ್​ ಸರ್ಕಾರ ಕಾರಣ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯನ್ನು ವಿರೋಧಿಸುವುದಕ್ಕಾಗಿ ಎನ್​ಇಪಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಎಸ್​ಇಪಿಗೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದ್ದು, ಸಮಿತಿ ಮುಕ್ಯಸ್ಥರನ್ನಾಗಿ ಮಹಾರಾಷ್ಟ್ರದ ಸುಖದೇವ್​ ಥೋರತ್​ ಅವರನ್ನು ನೇಮಿಸಿದೆ. ನಮ್ಮ ರಾಜ್ಯದ ಸಂಸತಿ, ಪರಂಪರೆ, ಇತಿಹಾಸಕ್ಕೆ ಹೊಂದುವಂತಹ ಶಿಕ್ಷಣ ನೀತಿಯನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ?. ಸಮಿತಿಗೆ ಹೊರ ರಾಜ್ಯದವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ನಮ್ಮವರಿಗೆ ಅವಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.
ಎಸ್​ಇಪಿ ಸಮಿತಿಯ ಕಾರ್ಯ ವೈಖರಿ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್​ಪಿಪಿ ಸಮಿತಿಯವರು ಕೆಲವೇ ಆಯ್ದ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ಆಡಳಿತ ಮಂಡಳಿಯವರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾದ ನೀತಿ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಎಸ್​ಇಪಿ ಜಾರಿ ಮಾಡಲು ಹಠಮಾರಿ ಧೋರಣೆ ಅನುಸರಿಸಿ ರಾಜ್ಯದಲ್ಲಿ ಎಸ್​ಇಪಿ ಜಾರಿ ತಂದರೆ ಅದರಿಂದ ವಿದ್ಯಾಥಿರ್ಗಳಿಗೆ ತೊಂದರೆ ಆಗಲಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಿಬಿಎಸ್​ಇ, ಐಸಿಎಸ್​ಇ ಶಾಲೆಗಳು ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳ ವಿದ್ಯಾಥಿರ್ಗಳು ಎನ್​ಇಪಿ ಪಠ್ಯ ಕಲಿತರೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾಥಿರ್ಗಳು ಎಸ್​ಇಪಿ ಪಠ್ಯ ಕಲಿಯಬೇಕಾಗುತ್ತದೆ. ಎರಡು ರೀತಿಯ ಶಿಕ್ಷಣ ಪದ್ಧತಿಗಳಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್​ ಅಂತ ಹೊಸ ರಾಷ್ಟ್ರೀ ಶಿಕ್ಷಣ ನೀತಿ ಜಾರಿಗೊಳಿಸಿಲ್ಲ. ಅದರ ಹಿಂದೆ ನಾಲ್ಕು ವರ್ಷಗಳ ಶ್ರಮವಿದೆ. ಅಧ್ಯಯನವಿದೆ. ಜ್ಞಾನ ಮತ್ತು ಕೌಶಲ್ಯದಲ್ಲಿ ನಂಬಿಕೆ ಇಟ್ಟಿರುವ ಪ್ರಧಾನಿ ಮೋದಿ ಅದಕ್ಕೆ ತಕ್ಕಂತೆ ನಮ್ಮ ದೇಶ ಶೈಕ್ಷಣಿಕ ಹಿತಕ್ಕಾಗಿ ಎನ್​ಇಪಿ ರೂಪಿಸಿದ್ದಾರೆ. ಎನ್​ಇಪಿಯನ್ನೇ ರಾಜ್ಯ ಸರ್ಕಾರ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯದೇವ ಮೆಣಸಗಿ, ಶಶಿಧರ ದಿಂಡೂರ, ಸಂತೋಷ್​ ಅಕ್ಕಿ, ಮಹಾಂತೇಶ, ಮಲ್ಲಿಕಾರ್ಜುನ, ಪುನೀತ್​ ಬೆನಕನವಾರಿ ಇದ್ದರು.

ಸಹಿ ಸಂಗ್ರಹ ಅಭಿಯಾನ
ರಾಜ್ಯದಲ್ಲಿ ಎನ್​ಇಪಿ ಮುಂದುವರಿಸುವಂತೆ ಆಗ್ರಹಿಸಿ ಪೀಪಲ್ಸ್​ ೋರಂ ಫಾರ್​ ಕರ್ನಾಟಕ ಎಜುಕೇಷನ್​ ಸಂಸ್ಥೆ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದ್ದು, ಇದಕ್ಕೆ ಒಪ್ಪಿ 10,16,080 ಮಂದಿ ಸಹಿ ಹಾಕಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ತಿಳಿಸಿದರು.
ಮೊದಲ ಹಂತದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಎನ್​ಇಪಿ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಈ ಸಂಬಂಧ ರಾಜ್ಯದ 53 ಕಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಎರಡನೇ ಹಂತದಲ್ಲಿ ರಾಜ್ಯಕ್ಕೆ ಎನ್​ಇಪಿಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿದ್ಯಾಥಿರ್ಗಳು, ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಒಟ್ಟು 10,16,080 ಮಂದಿ ಸಹಿ ಹಾಕಿದ್ದಾರೆ. ಜನರ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಬೇಕು. ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಸಿಎಂ ಭೇಟಿಗೆ ಸಮಯ ಕೇಳಲಾಗಿದೆ. ಇಬ್ಬರು ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.