ಜಿಲ್ಲೆ

ಎಣ್ಮೂರು ಆದಿಗರಡಿಯಲ್ಲಿ ನೇಮ

ಸೌಮ್ಯ ಆರ್

ಸುಬ್ರಹ್ಮಣ್ಯ: ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ಗರಡಿಯಲ್ಲಿ ಶ್ರೀ ಆದಿ ಬೈದೇರುಗಳ ನೇಮವು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನ ತನಕ ಜರುಗಿತು.

ಶುಕ್ರವಾರ ಬೆಳಗ್ಗೆ ನಾಗ ತಂಬಿಲದ ಬಳಿಕ ಮುಹೂರ್ತ ತೋರಣ ನೆರವೇರಿತು. ಮಧ್ಯಾಹ್ನ ಕಟ್ಟಬೀಡಿನಿಂದ ಭಂಡಾರ ಹೊರಟು, ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ ಬೈದೇರುಗಳು ಗರಡಿ ಇಳಿಯುವ ವಿಧಿವಿಧಾನ ನೆರವೇರಿತು. ನಂತರ ಗರಡಿಯಲ್ಲಿ ನರ್ತನ ಸೇವೆ ನೆರವೇರಿತು. ತದನಂತರ ರಂಗಸ್ಥಳದಲ್ಲಿ ನರ್ತನ ಸೇವೆ ನಡೆಯಿತು.

ಮಧ್ಯರಾತ್ರಿಯ ವೇಳೆಗೆ ಕಿನ್ನಿದಾರು ಗರಡಿ ಇಳಿಯುವ ವಿಧಿವಿಧಾನ ನಡೆಯಿತು. ನಂತರ ನರ್ತನ ಸೇವೆ ನಡೆಯಿತು. ಶನಿವಾರ ಮುಂಜಾನೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ತೆರಳಿ ಬೀಡಿಗೆ ಕಾಣಿಕೆ ಅರ್ಪಿಸಿದರು. ಗರಡಿಗೆ ಮರಳಿದ ಬೈದೇರುಗಳು ನರ್ತನ ಸೇವೆ ನೆರವೇರಿಸಿದರು. ಬಳಿಕ ರಂಗಸ್ಥಳದಲ್ಲಿ ಕೋಟಿ ಚೆನ್ನಯರ ದರ್ಶನ(ಸೇಟು) ನೆರವೇರಿತು. ಬಳಿಕ ತುಲಾಭಾರ ನೆರವೇರಿತು.

ಗರಡಿಯ ಆನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಕಟ್ಟಬೀಡು ಮನೆತನದವರು, ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಶುಕ್ರವಾರ ಸಭಾ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.