ಜಿಲ್ಲೆ

ಜೀವನ ಶೈಲಿ ಬದಲಾವಣೆಯಿಂದ ದೊಡ್ಡ ಪರಿವರ್ತನೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬರ ಜೀವನ ಶೈಲಿಯಲ್ಲಿನ ಸಣ್ಣಸಣ್ಣ ಬದಲಾವಣೆ ಭವಿಷ್ಯದಲ್ಲಿ ದೊಡ್ಡ ಪರಿವರ್ತನೆ ಮಾಡಬಲ್ಲ ಶಕ್ತಿ ಇದೆ ಎಂದು ಪವಾಡ ಶ್ರೀ ಬಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಕಲಿತದ್ದನ್ನು ಪರೀಕ್ಷೆಗಷ್ಟೇ ಸೀಮಿತ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳದಿರುವುದರಿಂದ ದೇಶದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ. ತರಗತಿ ಶಿಕ್ಷಣದ ಜತೆಗೆ ಸಾಮಾಜಿಕ ಹೊಣೆಗಾರಿಕೆ ಶಿಕ್ಷಣದ ಅವಶ್ಯಕತೆ ಮನಗಾಣಬೇಕು ಎಂದರು.
ಮನಸ್ಸು ಮಾಡಿದರೆ ಅದ್ಭುತ ಬದಲಾವಣೆಗಳೆಲ್ಲವೂ ಅಡುಗೆ ಮನೆಯಿಂದಲೇ ಆಗಬಹುದು. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತೊಡಗಿರುವ ಭಾರತೀಯ ಮಹಿಳೆಯರ ಸಾಧನೆಯೇ ಇದಕ್ಕೆ ನಿದರ್ಶನ. ವಿದ್ಯಾರ್ಥಿ ಶಿಕ್ಷಣದ ಜತೆಗೆ ಸಂಸ್ಕಾರ ಮೈಗ್ಗೂಡಿಸಿಕೊಂಡು ಉತ್ತಮ ಸಾಧನೆ ಮಾಡಿಬೇಕು ಎಂದರು.
ನಟ ಶಮಂತ್‌ಗೌಡ ಮಾತನಾಡಿ, ಕಾಲೇಜಿಗೆ ಸೇರುವ ವೇಳೆ ಇರುವ ಉತ್ಸಾಹ ಕೊನೆಯವರೆಗೂ ಇರಬೇಕು. ಜೀವನದಲ್ಲಿ ಕಾಲೇಜು ಶಿಕ್ಷಣ ಅತ್ಯಂತ ಪ್ರಮುಖವಾಗಿದ್ದು, ಆದಷ್ಟು ಎಚ್ಚರಿಕೆಯಿಂದ ಅಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದ ಅವರು, ಸಾಮಾಜಿಕ ಜಾಲತಾಣ ಬಳಕೆ ಮಾಡುವ ಬಗ್ಗೆ ಸ್ವಲ್ಪ ಜಾಗೃತಿ ಇರಬೇಕು ಎಂದರು.
ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಗೌರವದ ಜತೆಗೆ ಹಣ ಸಂಪಾದನೆಯನ್ನೂ ಮಾಡಬಹುದು. ಶಿಕ್ಷಣ ಜತೆಗೆ ವಿದ್ಯಾರ್ಥಿಗಳು ನೃತ್ಯ, ಸಂಗೀತ, ಅಭಿನಯದಲ್ಲಿ ತೊಡಗಿಸಿಕೊಂಡು ಸಿನಿಮಾ ಕ್ಷೇತ್ರಕ್ಕೂ ಕೊಡುಗೆ ನೀಡಬಹುದು ಎಂದರು.
ಪ್ರಾಧ್ಯಾಪಕರಾದ ಗೋವಿಂದರಾಜು, ಹರೀಶ್, ಪ್ರಭಾವತಿ, ತಾರಾ, ಸೌಮ್ಯಶ್ರೀ, ಜಯಲತಾ, ಲಕ್ಷ್ಮೀ, ಭವ್ಯಾ, ಜ್ಯೋತಿ, ನೇತ್ರಾವತಿ, ವನಜಾಕ್ಷಮ್ಮ, ವಿದ್ಯಾ, ನಾಗರತ್ನಾ, ವೇದಾ ಮತ್ತಿತರರು ಉಪಸ್ಥಿತರಿದ್ದರು.