ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕಾಯಕ ಸಮುದಾಯಗಳಲ್ಲಿ ಒಂದಾಗಿರುವ ದ್ವಿಚಕ್ರ ವಾಹನ ದುರಸ್ತಿದಾರರು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ ಹೇಳಿದರು.
ನಗರದ ರೇಣುಕಾನಗರದಲ್ಲಿ ದ್ವಿಚಕ್ರ ವಾಹನ ದುರಸ್ಥಿದಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮೊಬೈಲ್ ಆಯಿಲ್ ಕಂಪನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಬಿಡಿ ಸ್ಕ್ಯಾನರ್ ಕುರಿತ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ನಗರದಲ್ಲಿರುವ ದ್ವಿಚಕ್ರ ವಾಹನಗಳ ದುರಸ್ತಿಗಾರರನ್ನು ಒಂದೇ ಸೂರಿನಡಿ ಸಂಘಟಿಸಿ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತಂದು ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನವಿರುವ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಆದರೆ ಈ ಹಿಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ದುರಸ್ತಿ ಮಾಡುತ್ತಿದ್ದವರಿಗೆ ಹೊಸ ತಂತ್ರಜ್ಞಾನ ಹೊಂದಿರುವ ವಾಹನಗಳ ದುರಸ್ತಿಗೆ ತೊಡಕಾಗುತ್ತಿರುವುದನ್ನು ತಮ್ಮ ಸಂಘಟನೆ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಮೊಬೈಲ್ ಆಯಿಲ್ ಕಂಪನಿ ಸಹಯೋಗದಲ್ಲಿ ಒಬಿಡಿ ಸ್ಕ್ಯಾನರ್ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ದ್ವಿಚಕ್ರ ವಾಹನ ದುರಸ್ತಿದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೈಯದ್‌ಬಾಬು, ಉಪಾಧ್ಯಕ್ಷ ಶಂಕರ್, ಗೌರವಾಧ್ಯಕ್ಷ ಮೌಲ, ಕಾರ್ಯದರ್ಶಿ ನೂರ್‌ಪಾಷಾ, ಕಿರಣ್‌ಕುಮಾರ್, ಖಜಾಂಚಿ ಪ್ರಕಾಶ್, ಮುನ್ನಾ, ಸದಸ್ಯ ಭಾಸ್ಕರ್, ಶಿವಕುಮಾರ್, ಮೌಲಜಾನ್, ಮುಖೇಶ್, ಪಾಚಾಪೀರ್, ಬಾಲಕೃಷ್ಣ, ಮುಖಂಡ ರಂಗಣ್ಣ ಇತರರು ಇದ್ದರು.