ಜಿಲ್ಲೆ

ಚುಚ್ಚುಮದ್ದಿಗಿಂತ ತಾಯಿ ಹಾಲು ಶಕ್ತಿಶಾಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಯಿ ಹಾಲು ಮಗುವಿಗೆ ಅಮೃತವಿದ್ದಂತೆ. ಹಾಗೆಯೇ, ಅತ್ಯಂತ ಫೌಷ್ಟಕಾಂಶಭರಿತ ಆಹಾರವಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಭಕ್ತನಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಸ್ಥೆ ಸಹಯೋಗದಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಮಾಸಾಚರಣೆ ಪ್ರಯುಕ್ತ ಮಹಿಳೆಯರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ತನ್ಯಪಾನದಿಂದ ಶಿಶು ಮರಣ ತಪ್ಪಿಸಲು ಸಾಧ್ಯ. ತಾಯಿ ಹಾಲಿನಷ್ಟು ಪೌಷ್ಟಕಾಂಶ ಭರಿತ ಆಹಾರವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಮಗುವಿಗೆ ನೀಡುವ ಚುಚ್ಚುಮದ್ದಿಗಿಂತ ಹಾಲು ಹೆಚ್ಚು ಶಕ್ತಿಶಾಲಿಯಾಗಿದೆ ಎಂದರು.
ಇತ್ತೀಚೆಗೆ ಕೆಲ ಮಹಿಳೆಯರು ಸ್ತನ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅಂತಹವರಿಗೆ ರೋಟರಿ ಸಂಸ್ಥೆಯಿಂದ ಉಚಿತವಾಗಿ ಶಿಬಿರ ಆಯೋಜಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ ಮಾತನಾಡಿ, ತಾಯಿ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಅಂಶಗಳು ಅಡಕವಾಗಿವೆ. ಮಗು ಜನಿಸಿ ಮೂರು ದಿನದ ಹಾಲಿನಲ್ಲಿ ಹೆಚ್ಚು ರೋಗನಿರೋಧಕ ಅಂಶವಿದೆ. ಆದ್ದರಿಂದ ತಪ್ಪದೆ ಹಾಲು ಕುಡಿಸಬೇಕು ಎಂದರು.
ಭಕ್ತನಪಾಳ್ಯ ಅಂಗನವಾಡಿಯ 20ಕ್ಕೂ ಹೆಚ್ಚು ಮಕ್ಕಳಿಗೆ ರೋಟರಿ ನಿರ್ದೇಶಕ ದುರ್ಗದಾಸಶೆಟ್ಟಿ ಸಹಕಾರದಲ್ಲಿ ಉಚಿತವಾಗಿ ಶೂ ಹಾಗೂ ಸಾಕ್ಸ್ ವಿತರಿಸಲಾಯಿತು.
ನಗರಸಭೆ ಸಮುದಾಯ ಸಂಘಟಕ ನಾರಾಯಣ್‌ಸ್ವಾಮಿ, ರೋಟರಿ ಕಾರ್ಯದರ್ಶಿ ಶಿವರಾಮಯ್ಯ, ಮಾಜಿ ಅಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ದುರ್ಗದಾಸ್‌ಶೆಟ್ಟಿ, ಡಾ.ರಶ್ಮಿ, ಉಮಾನಾರಾಯಣ್, ಸದಸ್ಯರಾದ ನಳಿನಾ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.