ಜಿಲ್ಲೆ

ನೆಲಮಂಗಲ ನಗರಸಭೆ ಕಾಂಗ್ರೆಸ್ ವಶ

ಅಧ್ಯಕ್ಷರಾಗಿ ಗಣೇಶ್, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆ- ಉಪವಿಭಾಗಾಧಿಕಾರಿ ದುರ್ಗಾಶ್ರೀ ಘೋಷಣೆ

ನೆಲಮಂಗಲ: ಬಾರಿ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡೂ ಕಾಂಗ್ರೆಸ್ ಪಾಲಾಗಿದ್ದು, ಜೆಡಿಎಸ್, ಬಿಜೆಪಿ ಚುನಾಯಿತ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದ ಮೈತ್ರಿ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿದೆ.

ನಗರಸಭೆ ಅಧ್ಯಕ್ಷರಾಗಿ ಎನ್.ಗಣೇಶ್ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಆಯ್ಕೆಯಾಗಿದ್ದಾರೆ.

ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರೆಡು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಗುರುವಾರ ಚುನಾವಣೆ ನಿಗದಿಯಾಗಿತ್ತು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಎನ್.ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಆನಂದ್ ನಾಮಪತ್ರ ಸಲ್ಲಿಸಿದ್ದರು. ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಅಂಜನಾಮೂರ್ತಿ (ಪಾಪಣ್ಣಿ), ಉಪಾಧ್ಯಕ್ಷ ಸ್ಥಾನಕ್ಕೆ ಆಂಜಿನಪ್ಪ ನಾಮಪತ್ರ ಸಲ್ಲಿಸಿದ್ದರು.

ಎನ್.ಗಣೇಶ್, ಜಿ.ಆನಂದ್ ಅವರಿಗೆ ತಲಾ 18 ಮತಗಳು ದೊರೆತು ಜಯಶೀಲರಾದರು. ಮೈತ್ರಿ ಪಕ್ಷದ ಅಂಜನಾಮೂರ್ತಿ, ಆಂಜಿನಪ್ಪ ತಲಾ 10 ಮತಗಳು ದೊರೆತಿದ್ದು, ಪರಾಭವಗೊಂಡರು ಎಂದು ಚುನಾವಣಾಧಿಕಾರಿಯಾಗಿದ್ದ, ಉಪವಿಭಾಗಾಧಿಕಾರಿ ದುರ್ಗಾಶ್ರೀ ಘೋಷಣೆ ಮಾಡಿದರು.

ಶಾಸಕರಿಂದ ಮತದಾನ: ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ಭಾಗವಹಿಸಿದ್ದು ಮತಚಲಾವಣೆ ಮಾಡಿದ್ದಲ್ಲದೆ, ನೂತನ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಜಿ.ಆನಂದ್ ಅವರನ್ನು ಸನ್ಮಾನಿಸಿದರು. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ್ರು, ವಿಧಾನಪರಿಷತ್ ಮಾಜಿ ಸದಸ್ಯ ಬಿಎಂ.ಎಲ್.ಕಾಂತರಾಜು, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯ ವಾಸು, ಬಾಬು, ರಂಗಸ್ವಾಮಿ, ಮಾಜಿ ಅಧ್ಯಕ್ಷ ಹೇಮಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು ಇದ್ದರು.ವಾರ್ಡ್ ಅಭಿವೃದ್ಧಿಗೆ ಆದ್ಯತೆ: ಕಳೆದ ಎರೆಡು ವರ್ಷಗಳ ಹಿಂದೆ ಜೆಡಿಎಸ್‌ನ ಕೆಲ ಪ್ರಮುಖ ಸದಸ್ಯರು ಕಾಂಗ್ರೆಸ್ ಸೇರಿದ್ದರು, ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಮನಗಂಡು ಇತ್ತೀಚೆಗೆ ಬಿಜೆಪಿಯ ಇಬ್ಬರು ಸದಸ್ಯರು ಪಕ್ಷ ಸೇರ್ಪಡೆಯಾಗಿದ್ದರು. ಮೈತ್ರಿ ಪಕ್ಷಗಳಿಂದ ಜಾರಿ ಮಾಡಿದ್ದ ವಿಪ್ ಲೆಕ್ಕಿಸದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ವಿಪ್ ವಿಚಾರವಾಗಿ ಕಾನೂನು ಹೋರಾಟ ಮಾಡಿ ಸದಸ್ಯರ ಜತೆಯಲ್ಲಿ ಇರುವುದರ ಜತೆಗೆ ಪಕ್ಷದ ಎಲ್ಲ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಎನ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.ಮೈತ್ರಿ ಪಕ್ಷದಿಂದ ಧರಣಿ: ಚುನಾವಣೆಯಲ್ಲಿ ಮೈತ್ರಿ ಲೆಕ್ಕಚಾರ ಬುಡಮೇಲಾಗಿ ಕಾಂಗ್ರೆಸ್ ಬೆಂಬಲಿತರೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾದ ಕಾರಣ ತಲೆಕೆಡೆಸಿಕೊಂಡಿರುವ ಮೈತ್ರಿ ಮುಖಂಡರು ವಿಪ್ ಉಲ್ಲಂಘನೆ ಮಾಡಿರುವ ಸದಸ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಚುನಾವಣೆ ಬಳಿಕ ನಗರಸಭೆ ಕಚೇರಿಗೆ ತೆರಳಿ ಇಂದಿನ ಚುನಾವಣಾ ನಡಾವಳಿಯನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಅಧಿಕಾರಿಗಳು ಚುನಾವಣಾ ನಡಾವಳಿಯ ದೃಢೀಕೃತ ಪ್ರತಿ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೈತ್ರಿ ಪಕ್ಷದ ಸದಸ್ಯರು, ಮುಖಂಡರು ನಗರಸಭಾ ಕಚೇರಿಯಲ್ಲಿ ಧರಣಿ ನಡೆಸಿದರು. ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್, ಜೆಡಿಎಸ್ ಹೋಬಳಿ ಅಧ್ಯಕ್ಷ ರಮೇಶ್, ಸದಸ್ಯರಾದ ಕೆ.ಎಂ.ಶಿವಕುಮಾರ್, ಸುನೀಲ್ ಮೂಡ್, ಅಂಜಿನಮೂರ್ತಿ, ಹೆಚ್ಚವರಿ ಸದಸ್ಯ ಆಂಜಿನಮೂರ್ತಿ, ಕೃಪಾನಂದ, ರಾಮಮೂರ್ತಿ, ಮುನಿರಾಜು, ಮುಖಂಡ ಸುರೇಶ್ ಇದ್ದರು.ತಲೆಕೆಳಗಾದ ಮೈತ್ರಿ ಪಕ್ಷಗಳ ಲೆಕ್ಕಾಚಾರ: ಪುರಸಭೆ 23 ಸ್ಥಾನಗಳ ಪೈಕಿ 7 ಕಾಂಗ್ರೆಸ್, 13 ಜೆಡಿಎಸ್, 02 ಬಿಜೆಪಿ ಸೇರಿ 1 ಸ್ವತಂತ್ರ ಅಭ್ಯರ್ಥಿಗಳು ಚುನಾಯಿತರಾಗಿದ್ದರೆ, ಹೊಸದಾಗಿ ಗ್ರಾಮಪಂಚಾಯಿತಿ ಪ್ರದೇಶಗಳನ್ನು ವಿಲೀನ ಮಾಡಿಕೊಂಡು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು, ಹೊಸ ಪ್ರದೇಶಗಳಿಗೆ ಹೆಚ್ಚುವರಿ ಸದಸ್ಯರಾಗಿ 4 ಬಿಜೆಪಿ ಬೆಂಬಲಿತರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಕ್ಷೇತ್ರದಲ್ಲಾದ ರಾಜಕೀಯ ಬದಲಾವಣೆಯಿಂದಾಗಿ ಜೆಡಿಎಸ್‌ನ 08 ಈ ಮೊದಲೇ ಕಾಂಗ್ರೆಸ್ ಸೇರಿದ್ದರೆ ಇತ್ತೀಚೆಗಷ್ಟೆ ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ 8 ಮಂದಿ ಬಿಜೆಪಿಯ ಇಬ್ಬರು ಸದಸ್ಯರಿಗೆ ವಿಪ್ ಜಾರಿ ಮಾಡಿದ್ದು, ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ ಸದಸ್ಯರ ಪೈಕಿ ಒಬ್ಬರು ವಿಪ್‌ನಂತೆ ಮತ ಹಾಕಿದ್ದು, ಉಳಿದ 7 ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸಿದ್ದು, ಮೈತ್ರಿ ಪಕ್ಷಗಳ ಲೆಕ್ಕಚಾರ ಬುಡಮೇಲಾಯಿತು. ಚುನಾಯಿತರಾಗಿದ್ದ ಇಬ್ಬರೂ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರಿದ್ದರೂ ಇಬ್ಬರೂ ಸದಸ್ಯರಿಗೆ ಬಿಜೆಪಿಯಿಂದ ವಿಪ್ ಜಾರಿ ಮಾಡಿದ್ದು ಹಾಸ್ಯಸ್ಪದ ಎಂಬ ಮಾತು ಕೇಳಿಬಂದವು.