ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರಕ್ಕೆ ಕಾವೇರಿ ನೀರು ತರುವ ಜತೆಗೆ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸಯ್ಯ ಹೇಳಿದರು.
ನಗರಸಭೆ ವ್ಯಾಪ್ತಿಯ ಭಿನ್ನಮಂಗಲದ ಮುಕ್ತನಾಥೇಶ್ವರ ದೇವಾಲಯ ರಸ್ತೆಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಂತ-4ರ 14 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದು, ಪರಿಹಾರ ಕಂಡುಕೊಳ್ಳಬೇಕಿದೆ. ಕಾವೇರಿ ನೀರು ತರುವ ಡಿಪಿಆರ್‌ಗೆ ಅನುಮೋದನೆ ದೊರೆಯಲಿದೆ. ಒಳಚರಂಡಿ ಯೋಜನೆಗೆ ರಸ್ತೆ ಅಗೆಯಬೇಕಾದ್ದರಿಂದ ಅಧಿಕಾರಿ, ಜನಪ್ರತಿನಿಧಿಗಳ ಸಭೆ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶೀಘ್ರದಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಅಗತ್ಯವಿರುವ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ನಡೆಸಿ ಕಳೆಪೆಗೆ ಅವಕಾಶವಾಗದಂತೆ ಎಚ್ಚರಿಕೆವಹಿಸಬೇಕು. ಗುತ್ತಿಗೆದಾರರು ರಸ್ತೆಯ ಗುಣಮಟ್ಟ ಲೋಪವಾಗದಂತೆ ನೋಡಿಕೊಳ್ಳಬೇಕು. ನಾನೂ ಖುದ್ದಾಗಿ ಪರಿಶೀಲಿಸಲಿದ್ದೇನೆ ಎಂದರು.
ಮಾಜಿ ಎಂಎಲ್‌ಸಿ ಬಿಎಂಎಲ್ ಕಾಂತರಾಜು ಮಾತನಾಡಿ, ರಸ್ತೆ ತಗ್ಗು ಪ್ರದೇಶವಾದ್ದರಿಂದ ಮಳೆಯ ನೀರು ನಿಂತು ರಸ್ತೆ ಬೇಗ ಹಾಳಾಗುತ್ತಿದೆ. ಅಧಿಕಾರಿಗಳು, ಶಾಸಕರು ವಸತಿ ಬಡಾವಣೆಯಲ್ಲಿ ರಾಜಕಾಲುವೆ ವಿಸ್ತರಣೆ ಜತೆಗೆ ಸೇತುವೆ ವಿಸ್ತರಣೆ ಮಾಡಿದರೆ ಮಳೆಯ ನೀರು ಸರಾಗವಾಗಿ ಹರಿದು ಸಂಭವಿಸಬಹುದಾದ ಅವಾಂತರ ತಪ್ಪಲಿದೆ ಎಂದರು.