ಜಿಲ್ಲೆ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವೈಯಕ್ತಿಕ ಶಕ್ತಿಸಾಮರ್ಥ್ಯ ಜತೆಗೆ ಕೌಶಲ ವೃದ್ಧಿಯಾಗಲಿವೆ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಪ್ರಕಾಶ್ ತಿಳಿಸಿದರು.
ನಗರದ ಸೊಂಡೇಕೊಪ್ಪ ಮುಖ್ಯರಸ್ತೆಯ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್, ಎನ್‌ಸಿಸಿ ಸಾಂಸ್ಕೃತಿಕ ಮತ್ತು ಕ್ರೀಡೆ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು ಎಂಬ ಉದ್ದೇಶದಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾಕಷ್ಟು ಶಿಕ್ಷಣ ಸಂಸ್ಥೆ ಆರಂಭಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಅವರು ಸ್ಥಾಪನೆ ಮಾಡಿದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಂದರು.
ಸಮಾಜದ ಸರ್ವ ಸಮಸ್ಯೆಗಳಿಗೆ ಶಿಕ್ಷಕರು ನಿಜವಾದ ಔಷಧವಾಗಿದ್ದು, ಮಕ್ಕಳು ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿಯಬೇಕು. ಕೆಲ ದಶಕಗಳ ಹಿಂದೆ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ವ್ಯತ್ಯಾಸಗಳಿವೆ. ತಂತ್ರಜ್ಞಾನದ ಬೆಳೆವಣಿಗೆಯೇನೋ ಆಗುತ್ತಿದೆ. ಆದರೆ, ಯುವಜನತೆ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಇದು ಬೇಸರದ ಸಂಗತಿ ಎಂದರು.
ಪದವಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡಬೇಕಿದೆ. ಹೆಚ್ಚು ಅಂಕಗಳ ಜತೆಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಡಾ.ಕೆ.ಎನ್.ಅಮರೇಂದ್ರ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಲೇಜಿಗೆ ಕೀರ್ತಿ ತಂದಿರುವುದು ಸಂತಸದ ಸಂಗತಿ. ತಾಲೂಕಿನಾದ್ಯಂತ ಸಾಕಷ್ಟು ವಿದ್ಯಾಸಂಸ್ಥೆಯಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸಿದ್ಧಗಂಗಾ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸರಿಯಾದ ರೀತಿ ಸದ್ಭಳಕೆ ಮಾಡಿಕೊಂಡು, ಉತ್ತಮ ಪ್ರಜೆಯಾಗಬೇಕಿದೆ ಎಂದರು.
ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಶ್ರೀ ಸಿದ್ಧಗಂಗಾ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ, ವ್ಯವಸ್ಥಾಪಕ ಗಂಗಣ್ಣ, ಚಲನಚಿತ್ರ ನಟಿ ಸ್ವಪ್ನಶ್ರೀ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೃಷ್ಣರೆಡ್ಡಿ, ಕಾಲೇಜು ಪ್ರಾಧ್ಯಾಪಕ ಡಾ.ಜಿ.ಗಂಗರಾಜು, ಪ್ರೊ.ವಿಜಯದುಗ್ಗಪ್ಪ, ಪ್ರೊ.ಪ್ರಕಾಶ್, ಪ್ರೊ.ಕೆಂಪೇಗೌಡ, ಪ್ರೊ.ಕೋಮಲಾ, ಪ್ರೊ.ಕಲಾವತಿ, ಪ್ರೊ.ಚೈತ್ರಾ, ಪ್ರೊ.ಸೋಮಸುಂದರ್, ಪ್ರೊ.ಮನುಕುಮಾರ್ ಮತ್ತಿತರರು ಇದ್ದರು.