ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ರೈತರಿಗೆ ಶೀತಲೀಕೇಂದ್ರ ಸಹಕಾರಿ ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಹ್ಯಾಡಾಳು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ಮಿಸಿದ್ದ 1.5 ಸಾವಿರ ಲೀಟರ್ ಸಾಮರ್ಥ್ಯದ ಹಾಲು ಶೀತಲೀಕರಣ (ಬಿಎಂಸಿ) ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಎಂಸಿ ಕೇಂದ್ರ ಸ್ಥಾಪನೆಯ ಕನಸು ನನಸಾಗಿದೆ. ಶೀತಲೀಕರಣ ಕೇಂದ್ರ ಆರಂಭವಾಗಿರುವುದರಿಂದ ಹಾಲು ಸಂಗ್ರಹಣೆಗೆ ಸಮಯಾವಕಾಶದ ಜತೆಗೆ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ದೇಶದಲ್ಲೇ ಹಾಲಿನ ಗುಣಮಟ್ಟ ಕಾಯ್ದುಕೊಳ್ಳವಲ್ಲಿ ತಾಲೂಕು ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಬಿಎಂಸಿ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ರೈತರು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದು, ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಸೇರಿ ರೈತರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಯೋಜನೆಯ ಸದುಪಯೋಗ ಪಡಿಸಿಕೊಂಡು ಅನ್ನದಾತರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಹೈನುಗಾರಿಕೆ ಮಹತ್ವದ ಪಾತ್ರವಹಿಸುತ್ತಿದೆ. ಹೈನುಗಾರಿಕೆ ಉತ್ತೇಜನಕ್ಕಾಗಿ ಅನೇಕ ಯೋಜನೆಗಳನ್ನು ಬಮುಲ್ ಅನುಷ್ಠಾನಗೊಳಿಸಿದೆ. ಹೆಚ್ಚು ಹಾಲು ಉತ್ಪಾದನೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ತಿಳಿಸಿದರು.
ಗುರುವನಹಳ್ಳಿ ಡೇರಿ ಕಾರ್ಯದರ್ಶಿ ರಾಜಗೋಪಾಲ್, ಡೇರಿ ಉಪಾಧ್ಯಕ್ಷ ಎ.ಕುಮಾರಸ್ವಾಮಿ, ನಿರ್ದೇಶಕರಾದ ಎ.ನಾರಾಯಣಪ್ಪ, ಬೈಲಮೂರ್ತಿ, ಗೋವಿಂದಪ್ಪ, ಎಚ್.ಜಿ.ಶ್ರೀನಿವಾಸ್, ಗಂಗಹನುಮಕ್ಕ, ಜಯಮ್ಮ, ಪುಟ್ಟಗಂಗಮ್ಮ, ಶಾರದಮ್ಮ, ಲಕ್ಷ್ಮಮ್ಮ, ಈರಮ್ಮ, ಚಿಕ್ಕಹನುಮಯ್ಯ, ಕಾರ್ಯದರ್ಶಿ ಎಲ್.ರಾಜಶೇಖರ್, ನೇತ್ರಾವತಿ, ಹಾಲು ಪರೀಕ್ಷಕಿ ಕೆಂಪಮ್ಮಮತ್ತಿತರರು ಉಪಸ್ಥಿತರಿದ್ದರು.