ಜಿಲ್ಲೆ

ಹೆದ್ದಾರಿಯಲ್ಲಿ ಎಡಿಜಿಪಿ ರೌಂಡ್ಸ್

ಶಿವರಾಜ.ಎಂ

ಅಪಘಾತ ಪ್ರಕರಣಕ್ಕೆ ಕಡಿವಾಣ ಹಾಕಲು ಡಾ.ಅಲೋಕ್‌ಕುಮಾರ್ ತಾಕೀತು

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬೆಂಗಳೂರು-ತುಮಕೂರು ರಾ.ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಡಾ.ಅಲೋಕ್‌ಕುಮಾರ್ ಹೆದ್ದಾರಿಯ ಹಲವೆಡೆ ಪರಿಶೀಲನೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವ್ಯಾಪ್ತಿಯ 60 ಕಿಲೋ ಮೀಟರ್ ಮಾರ್ಗದಲ್ಲಿ ಸಂಚರಿಸಿದರು. ಜತೆಗೆ ನೈಸ್ ರಸ್ತೆಯ ಟೋಲ್ ಪ್ಲಾಜಾ, ಮಾದಾವರ ಟೋಲ್, ಅಡಕಿಮಾರನಹಳ್ಳಿಯ ರಾ.ಹೆದ್ದಾರಿ ನಗರದ ಜಾಸ್‌ಟೋಲ್ ಪ್ಲಾಜಾಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆದ್ದಾರಿಯ ಸಾಕಷ್ಟು ಸ್ಥಳಗಳಲ್ಲಿ ಸೂಚನಾ ಫಲಕಗಳು ಇಲ್ಲದನ್ನು ಕಂಡ ಅವರು, ತಕ್ಷಣ ನಾಮಫಲಕ ಅಳವಡಿಕೆ ಮಾಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬೆಂಗಳೂರು-ತುಮಕೂರು ರಾ.ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೋಲ್ ಪ್ಲಾಜಾ ಬಳಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಹೆದ್ದಾರಿ ಗಸ್ತು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಅಲೋಕ್‌ಕುಮಾರ್ ತಿಳಿಸಿದರು.
ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಮದ್ಯಸೇವಿಸಿ ವಾಹನ ಚಲಾಯಿಸಬಾರದು. ಹಾಗೆಯೇ ನಿಯಮ ಪಾಲನೆಗೆ ಅರಿವು ಮೂಡಿಸುವ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರೂ ಸಂಚಾರ ನಿಯಮ ಅನುಸರಿದಾಗ ಅಪಘಾತ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದರು.

ಪರವಾನಗಿ ರದ್ದು: ಈಗಾಗಲೇ ನಾಲ್ಲೈದು ಹೈವೇ ಪೆಟ್ರೋಲಿಂಗ್ ವಾಹನಗಳು ಗಸ್ತು ತಿರುಗುತ್ತಿವೆ. ಹೈಸ್ಪೀಡ್ ಲಿಮಿಟ್ ತಡೆಗೆ ಸ್ಪೀಡ್ ರೆಡಾರ್ ಅಳವಡಿಸಲಾಗುವುದು. ಹಾಗೆಯೇ ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸಿದರೆ ಪ್ರಕರಣ ದಾಖಲಿಸಿ ಪರವಾನಗಿ ರದ್ದುಪಡಿಸಲಾಗುವುದು ಎಡಿಜಿಪಿ ಡಾ.ಅಲೋಕ್‌ಕುಮಾರ್ ತಿಳಿಸಿದರು.

ಸ್ಮೈಲ್‌ಯುಆರ್ ಕ್ಯಾಮರಾ ಅಳವಡಿಕೆ: ಸಂಚಾರ ನಿಯಮ ಕಾಪಾಡುವ ಉದ್ದೇಶದಿಂದ ಪೈಲೆಟ್ ಕಾರ್ಯಕ್ರಮದಡಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಯಲ್ಲಿ 72 ಸ್ಮೈಲ್‌ಯುಆರ್ ಕ್ಯಾಮರಾ (ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾ) ಅಳವಡಿಕೆ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಸಿಬ್ಬಂದಿ ಬಳಿ ಇರುವ ಟ್ಯಾಪ್‌ಗೆ ಸಂದೇಶ ನೀಡುತ್ತದೆ. ಅದರಂತೆ ವಾಹನ ತಡೆದು ಪರಿಶೀಲನೆ ಮಾಡಿ ತಂಡ ವಿಧಿಸಲಾಗುವುದು ಎಂದು ಎಡಿಜಿಪಿ ತಿಳಿಸಿದರು.
ಕ್ಯಾಮರಾ ಮಾಹಿತಿ ಆಧರಿಸಿ ತಿಂಗಳಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಎಲ್ಲೆಡೆ ಈ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಟ್ರಾಫಿಕ್ ಹಾಗೂ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಎಎಂಪಿಆರ್ ಕ್ಯಾಮರಾ ಸಾಕಷ್ಟು ಸಹಕಾರಿ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್‌ಪಿ ಕೆ.ಸಿ.ಗೌತಮ್, ಆರಕ್ಷಕ ನಿರೀಕ್ಷಕರಾದ ಬಿ.ಎಸ್.ಮಂಜುನಾಥ್, ವಿ.ರಾಜೀವ್, ಶಶಿಧರ್, ಹಿರಿಯ ಮೊಟರ್ ವಾಹನ ನಿರೀಕ್ಷಕ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರದ್ದರು.