ಜಿಲ್ಲೆ

ವನ್ಯ ಸಂಪತ್ತು ರಕ್ಷಣೆ ಎಲ್ಲರ ಹೊಣೆ

ಊರಿಗೊಂದು ವನ, ದೌರ್ಜನ್ಯ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ದೇವರಾಜ ಭೂತೆ ಹೇಳಿಕೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕೆರೆ, ಕುಂಟೆ ಸೇರಿದಂತೆ ಅರಣ್ಯ ಸಂಪತ್ತು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಊರಿಗೊಂದು ವನ-ಕೆರೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಸಮಾಜದಲ್ಲಿ ನಗರೀಕರಣ ಹೆಚ್ಚಾದಂತೆ ಕೆರೆ, ಕುಂಟೆಗಳು ಕಣ್ಮರೆಯಾಗುತ್ತಿವೆ. ಬೆಂಗಳೂರು ನಗರದಲ್ಲಿ ಯಾವುದೇ ನದಿಯ ಮೂಲ ಇಲ್ಲದಿರುವುದರಿಂದ ನಾಡಪ್ರಭು ಕೆಂಪೇಗೌಡ ಅವರು ನಗರದಾದ್ಯಂತ ಸಾಕಷ್ಟು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಬೆಂಗಳೂರನ್ನು ಕೆರೆಗಳ ನಾಡು ಎಂದು ಕರೆಯುತ್ತಿದ್ದು ಈ ಸಾಕಷ್ಟು ಕೆರೆಗಳು ಕಣ್ಮೆರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ರಕ್ಷಣೆಗೆ ಸಂವಿಧಾನದಲ್ಲಿ ಸಾಕಷ್ಟು ಕಾಯ್ದೆಗಳಿವೆ. ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಗ್ರಾಮಾಂತರ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸಾಕಷ್ಟು ೆಕ್ಸೋ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ 3 ಹಂತದ ನ್ಯಾಯಾಲದಲ್ಲಿ ವಿಚಾರಣೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಜನರಿಗೆ ಕಾನೂನು ಅರಿವು ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ಅಧಿಕಾರಿಗಳು ಮಾಡಬೇಕಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ವಿಶ್ವನಾಥ್ ಮಾತನಾಡಿ, ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ 2012ರಲ್ಲಿ ಲೈಂಗಿಕ ಮಕ್ಕಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರ ಮೇಲೆಯು ಲೈಂಗಿಕ ಕಿರುಕುಳಗಳು ನಡೆಯುತ್ತಿದ್ದು, ಕಲಂ 4ರಲ್ಲಿ ಅಪರಾಧಿಗಳಿಗೆ 7ವರ್ಷ ಅಥವಾ ಜೀವಾವಧಿ ಜೈಲು ಶಿಕ್ಷೆ ನೀಡಲಾಗುತ್ತಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ 1ಸಾವಿರ ಪುರುಷರಿಗೆ 950 ಮಂದಿ ಮಹಿಳೆಯರಿದ್ದಾರೆ. ಬಾಲ್ಯ ವಿವಾಹ ಎಂಬುದು ಸಾಕಷ್ಟು ಮಾರಕವಾಗಿದ್ದು ಬಾಲ್ಯ ವಿವಾಹಕ್ಕೆ ಒಳಗಾದ ಸಾಕಷ್ಟು ಮಂದಿ ಮಕ್ಕಳು ಅಪೌಷ್ಠಕತೆಯಿಂದ ಬಳುತ್ತಿದ್ದಾರೆ. ಪ್ರತಿಯೊಬ್ಬರು ಬಾಲ್ಯ ವಿವಾಹ ಹಾಗೂ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದರು.
ರಾಜಸ್ವ ನಿರೀಕ್ಷಕ ಅಶ್ವತ್ಥ್, ಪ್ರಾಂಶುಪಾಲ ಡಾ.ಬಿ.ಎನ್.ನಾಗಭೂಷಣಯ್ಯ, ಪ್ರಾಧ್ಯಾಪಕ ಡಾ.ತೋಪೇಶ್, ಪ್ರೊ.ಹನುಮಂತರಾಜು, ಡಾ.ಮಂಜಪ್ಪ, ಡಾ.ಪ್ರಮೀಳಾ, ಮಂಜುಳಾ ಇದ್ದರು.