ಜಿಲ್ಲೆ

ಸೋಲನ್ನು ಸವಾಲಾಗಿಸಿಕೊಂಡರೆ ಗೆಲುವು

ಶಾಸಕ ಎನ್.ಶ್ರೀನಿವಾಸ್ ಅಭಿಮತ

ಕಸಬಾ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಚಾಲನೆ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಓದಿನ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಶಾಸಕ ಎನ್.ಶ್ರೀನಿವಾಸ್ ಕಿವಿಮಾತು ಹೇಳಿದರು.
ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕಸಬಾ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಕ್ಷೇತ್ರದತ್ತ ಪ್ರತಿಯೊಬ್ಬರಿಗೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತ ಕ್ರೀಡಾಪಟುಗಳು ಸೋಲನ್ನೇ ಸವಾಲಾಗಿ ಸ್ವೀಕರಿಸಿ ಮತ್ತೆ ಯತ್ನಿಸಬೇಕು. ಶಿಕ್ಷಣದ ಜತೆಗೆ ಸಾಕಷ್ಟು ಅವಕಾಶವಿರುವ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದ ಅವರು, ವಿವಿಧ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಮೂಲಕ ತಾಲೂಕಿಗೆ ಕೀರ್ತಿತರಬೇಕು ಎಂದರು.
ನೋಟ್ ಬುಕ್ ವಿತರಣೆ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಸೇರಿ ತಾಲೂಕಿದಾದ್ಯಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ.4ರಂದು ನಗರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಶಾಸಕರು ತಿಳಿಸಿದರು.
ವಿವಿಧ ಸ್ಫರ್ಧೆ:
ಪ್ರೌಢಶಾಲಾ ಬಾಲಕಿಯರ ಗುಂಪಿನ ಆಟ ಹಾಗೂ ಬಾಲಕರ ಮೇಲಾಟ ಆಯೋಜಿಸಲಾಗಿತ್ತು. ಆ.3ರಂದು ಪ್ರೌಢಶಾಲಾ ಬಾಲಕರ ಗುಂಪಿನ ಆಟಗಳು ಹಾಗೂ ಬಾಲಕಿಯರ ಮೇಲಾಟಗಳನ್ನು ಆ.4 ಮತ್ತು ಆ.5 ರಂದು ಹಿರಿಯ ಪ್ರಾಥಮಿಕ ಶಾಲೆಗಳ ಮೇಲಾಟಗಳು ಹಾಗೂ ಗುಂಪಿನ ಆಟ, ಆ.6 ಮತ್ತು ಆ.7ರಂದು ಕಿರಿಯ ಪ್ರಾಥಮಿಕ ಶಾಲೆಗಳ ಮೇಲಾಟಗಳು ಹಾಗೂ ಗುಂಪಿನ ಆಟ ಆಯೋಜಿಸಲಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯ 30 ಶಾಲೆಗಳಿಂದ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಂ. ಎಚ್.ತಿಮ್ಮಯ್ಯ ಮಾಹಿತಿ ನೀಡಿದರು.
ಕ್ರೀಡಾಕೂಟದ ಆರಂಭದಲ್ಲಿ ಧ್ವಜರೋಹಣ ನೆರವೇರಿಸಿದ ಬಳಿಕ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಪಥಸಂಚಲನ ನಡೆಸಿ ಕ್ರೀಡಾಪ್ರತಿಜ್ಞೆ ಸ್ವೀಕರಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ, ಹೇಮಂತ್‌ಕುಮಾರ್, ಎಂ.ನಾರಾಯಣ್‌ಗೌಡ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರೀಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಮುಖ್ಯಶಿಕ್ಷಕ ಪರಣ್ಣ, ಮುಖಂಡರಾದ ಮುನಿಯಪ್ಪ, ಕೃಷ್ಣಮೂರ್ತಿ, ಹನುಮಂತಮ್ಮ, ರವಿಕುಮಾರ್, ಮಂಜುನಾಥ್‌ಗೌಡ, ರುಕ್ಷ್ಮೀಣಿ, ದೀಪು ಮತ್ತಿತರರು ಉಪಸ್ಥಿತರಿದ್ದರು.