ಉಪ್ಪಿನಂಗಡಿ: ಹೆದ್ದಾರಿ ಅಗಲೀಕರಣದ ಕಾಮಗಾರಿಯ ವೇಳೆ ಸರ್ವೀಸ್ ರಸ್ತೆಯಲ್ಲಿ ನಡೆದಾಡಲಾಗದೆ ಎತ್ತರಿಸಿದ ರಸ್ತೆಗೆ ಇರಿಸಲಾದ ಏಣಿಯನ್ನೇರಿ ಮಕ್ಕಳು ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ಬೆನ್ನಲ್ಲೇ ಸರ್ವೀಸ್ ರಸ್ತೆಯನ್ನು ಸಂಚಾರಯೋಗ್ಯಗೊಳಿಸಿ ಏಣಿಯನ್ನು ತೆರವು ಮಾಡಲಾಗಿದೆ.
ಇಲ್ಲಿನ 34ನೇ ನೆಕ್ಕಿಲಾಡಿಯಲ್ಲಿ ಪ್ರಸಕ್ತ ಎತ್ತರಿಸಿದ ರಸ್ತೆಯ ಕಾಮಗಾರಿ ಪೂರ್ಣ ಹಂತವನ್ನು ಪ್ರವೇಶಿಸುತ್ತಿದ್ದು, ಹೆದ್ದಾರಿಯ ಸರ್ವೀಸ್ ರಸ್ತೆಯ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಇದರಲ್ಲಿ ಸುಲಲಿತವಾಗಿ ನಡೆದುಕೊಂಡು ಹೋಗಲು ಅಸಾಧ್ಯವಾಗಿ, ಮಕ್ಕಳು ಎತ್ತರಿಸಿದ ರಸ್ತೆಗೆ ನಿರ್ಮಾಣ ಕಾರ್ಮಿಕರು ಅಳವಡಿಸಿರುವ ಏಣಿಯನ್ನೇ ಬಳಸಿ ಹತ್ತಿ ಸರ್ಕಸ್ ಮಾಡುತ್ತಿದ್ದರು.
ಈ ಬಗ್ಗೆ ತ್ವರಿತ ಸ್ಪಂದನೆ ತೋರಿದ ಅಧಿಕಾರಿಗಳು ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಕಾರಣ ಶುಕ್ರವಾರ ಹೆದ್ದಾರಿಯ ಉಭಯ ಸರ್ವೀಸ್ ರಸ್ತೆಯನ್ನು ಸುಸ್ಥಿತಿಗೆ ತರಲು ಕ್ರಮ ಕೈಗೊಂಡಿದ್ದು, ಹಾಕಲಾದ ಮಣ್ಣನ್ನು ಸಮತಟ್ಟುಗೊಳಿಸಿ ಜಲ್ಲಿಕಲ್ಲು ಹಾಸುವ ಮೂಲಕ ರಸ್ತೆಯನ್ನು ನಡೆದಾಡಲು ಯೋಗ್ಯಗೊಳಿಸಿದ್ದಾರೆ. ಮಾತ್ರವಲ್ಲದೆ ಎತ್ತರಿಸಿದ ರಸ್ತೆಗೆ ಅಳವಡಿಸಿದ ಏಣಿಯನ್ನು ತೆರವುಗೊಳಿಸಿ ಮಕ್ಕಳು ಅವಾಂತರ ಸೃಷ್ಠಿಸುವುದನ್ನು ತಪ್ಪಿಸಿದ್ದಾರೆ.