ಚನ್ನಪಟ್ಟಣ : ಚನ್ನಪಟ್ಟಣದ ಮಹಾಜನತೆ ನಮಗೆ ಬೆಂಬಲ ನೀಡಿದ್ದಾರೆ ಎಂಬ ನಂಬಿಕೆ ಇದೆ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ನಗರದ ಎನ್‌ಡಿಎ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಚುನಾವಣೆಯಲ್ಲಿ ನನಗೆ ಶಕ್ತಿ ನೀಡಿದ್ದಾರೆ. ಈ ಚುನಾವಣೆಯಲ್ಲಿ ಹಿರಿಯರ ಆಶೀರ್ವಾದ, ಯುವಕರ ಬೆಂಬಲ ಎರಡೂ ಸಿಕ್ಕಿದೆ. ಈ ತಾಲೂಕಿನ ನಿರಂತರ ಸೇವೆಗೆ ನಾನು ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ದರು. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿದ್ದಾರೆ. 18 ದಿನಗಳ ಹಿಂದೆ ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆ ಉದ್ಭವ ಆಯ್ತು. ಆಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದರು ಎಂದು ಅಭ್ಯರ್ಥಿಯಾದ ಹಿನ್ನೆಲೆ ವಿವರಿಸಿದರು.
ಮೈತ್ರಿ ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಗೋವಿಂದನಹಳ್ಳಿ ನಾಗರಾಜು, ಭಾನುಪ್ರಸಾದ್, ಎಲೆಕೇರಿ ರವೀಶ್ ಇದ್ದರು.
ನಿದ್ದೆಗೆಟ್ಟು ಶ್ರಮ: ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ, ಮೈಸೂರು ಸಂಸದ ಯದುವೀರ ಒಡೆಯರ್, ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಸೇರಿ ಹಲವು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ನಾಯಕರೂ ಶ್ರಮಿಸಿದ್ದಾರೆ ಎಂದು ನಿಖಿಲ್ ತಿಳಿಸಿದರು.
ದೇವೇಗೌಡರ ಬಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅನಾರೊಗ್ಯದ ನಡುವೆಯೂ ಪ್ರಚಾರಕ್ಕೆ ಬಂದಿದ್ದಾರೆ. 32ಕ್ಕೂ ಹೆಚ್ಚು ಸಭೆ ನಡೆಸಿ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಈ ಕ್ಷೇತ್ರ ನನ್ನ ತಾತ, ತಂದೆಗೆ ರಾಜಕೀಯ ಶಕ್ತಿ ನೀಡಿದ್ದು, ನನಗೂ ಹೆಚ್ಚಿನ ಬೆಂಬಲ ನೀಡಿದ್ದಾರೆಂದು ನಿಖಿಲ್ ತಿಳಿಸಿದರು.
ಇದು ಕಾರ್ಯಕರ್ತರ ಚುನಾವಣೆ: ಈ ಬಾರಿಯ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಚುನಾವಣೆ ಆಗಿರಲಿಲ್ಲ, ಅದು ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆಯಾಗಿತ್ತು. ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ. ಎಲ್ಲರ ಪರಿಶ್ರಮದಿಂದ ದಾಖಲೆ ಪ್ರಮಾಣದ ಮತದಾನವಾಗಿದ್ದು, ಈ ಮತದಾನ ನನಗೆ ಪೂರಕವಾಗಿದೆ ಎಂದು ನಿಖಿಲ್ ಹೇಳಿದರು.
ಜನರೇ ಉತ್ತರಿಸುತ್ತಾರೆ: ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ನಿಖಿಲ್ ಕುಮಾರಸ್ವಾಮಿ, ಅವರ ಎಲ್ಲ ಹೇಳಿಕೆಗೂ ಜನ ಉತ್ತರ ಕೊಡ್ತಾರೆ. ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಜನ ನಿರ್ಧರಿಸಿದ ಗೆಲುವಿನ ಅಂತರ 23ನೇ ತಾರೀಕು ಗೊತ್ತಾಗುತ್ತದೆ ಎಂದು ನಿಖಿಲ್ ಹೇಳಿದರು.
ಚಾಮುಂಡೇಶ್ವರಿ ದರ್ಶನ: ನಿಖಿಲ್ ಕುಮಾರಸ್ವಾಮಿ ಗುರುವಾರ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ತಾಲೂಕಿನ ಇತಿಹಾಸ ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಇದೇವೇಳೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಜತೆ ಮಾತುಕತೆ ನಡೆಸಿದರು.