ಚನ್ನಪಟ್ಟಣ : ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಳೂರು ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿದ ಅವರಿಗೆ ಮೈತ್ರಿ ಪಕ್ಷದ ನಾಯಕರು ಸಾಥ್ ನೀಡಿದರು. ವಾಲೇತೋಪು ಗ್ರಾಮದಿಂದ ಪ್ರಚಾರ ಆರಂಭಿಸಿದ ನಿಖಿಲ್ ಕುಮಾರಸ್ವಾಮಿಗೆ ಎಲ್ಲೆಡೆ ಅದ್ದೂರಿ ಸ್ವಾಗತ ದೊರಕಿತು. ಪ್ರಚಾರಕ್ಕೂ ಮುನ್ನ ನಗರದ ನ್ಯಾಯಾಲಯಕ್ಕೆ ಆಗಮಿಸಿದ ಅವರು, ವಕೀಲರ ಮತ ಯಾಚಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಎಲ್ಲ ಸಮುದಾಯಗಳು ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇನೆ .ಈ ಬಾರಿ ನನ್ನ ಕೆಲಸ ನೋಡಲು ನನಗೆ ಒಂದು ಅವಕಾಶ ಕೊಡಿ ಎಂದರು. ಈ ವೇಳೆ ತಾಲೂಕು ವಕೀಲರ ಸಂಘದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು.
ವಕೀಲರಲ್ಲಿ ನಿಖಿಲ್ ಮನವಿ! : ಪಕ್ಷಾತೀತವಾಗಿ ನಾನು ಮನವಿ ಮಾಡ್ತಿದ್ದೇನೆ. ನಿಮ್ಮ ಸಹಕಾರ ನನ್ನ ಮೇಲೆ ಇರಲಿ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ನಿಮ್ಮ ಜತೆಜತೆಗೆ ಕೆಲಸ ಮಾಡುತ್ತೇನೆ. ಇದು ಅನುಕಂಪದ ಮೇಲೆ ನಡೆಯುವ ಚುನಾವಣೆ ಅಲ್ಲ. ಅಭಿವೃದ್ಧಿ ಮೇಲೆ ನಡೆಯುವ ಚುನಾವಣೆ. ರಾಜ್ಯ ಸರ್ಕಾರದಿಂದ ನಾವು ಅನುದಾನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಕೇಂದ್ರದಿಂದ ಅನುದಾನ ತಂದು ಕೆಲಸ ಮಾಡುತ್ತೇವೆ ಎಂದು ವಕೀಲರ ಬಳಿ ನಿಖಿಲ್ ಮನವಿ ಮಾಡಿದರು.
ನಿಮ್ಮ ಮನೆಮಗನಾಗಿರುತ್ತೇನೆ! : ತಾಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ನಿಖಿಲ್, ಎರಡು ಚುನಾವಣೆಯಲ್ಲಿ ನನ್ನನ್ನು ಕುತಂತ್ರದಿಂದ ಸೋಲಿಸಿದರು. ರಾಮನಗರದಲ್ಲಿ ಗ್‌ಟಿ ಕೊಟ್ಟು ಸೋಲಿಸಿದರು. ಈಗಲೂ ರಾತ್ರಿ ನಾಲ್ಕು ಗಂಟೆಗೆ ಬಂದು ಕೂಪನ್ ಕೊಡಬಹುದು. ಆದರೆ, ಎಲ್ಲವನ್ನೂ ಮೀರಿ ತಾಲೂಕಿನ ಜನತೆ ನನ್ನನ್ನು ಆಶೀರ್ವದಿಸುವ ವಿಶ್ವಾಸವಿದೆ. ನಿಮ್ಮ ಮನೆಮಗನಾಗಿ ಸೇವೆ ಮಾಡುತ್ತೇನೆ ಎಂದರು.
25 ಸಾವಿರ ಜನಕ್ಕೆ ಉದ್ಯೋಗಾವಕಾಶ : ನೀರಾವರಿ ಯೋಜನೆಗೆ ಭದ್ರಬುನಾದಿ ಹಾಕಿರೋದು ಮಾಜಿ ಪ್ರಧಾನಿ ದೇವೇಗೌಡರು, ಕುಮಾರಣ್ಣ ಚನ್ನಪಟ್ಟಣ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ. ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದಾರೆ.
150 ಕೋಟಿ ರೂ. ವೆಚ್ಚದಲ್ಲಿ ಮೊದಲನೇ ಹಂತದಲ್ಲಿ ರೇಷ್ಮೆ ಮಾರುಕಟ್ಟೆ ಮಾಡೋದಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಇದೆ. ನಾವು ಹಾಸನದಲ್ಲಿ ಹುಟ್ಟಿದವರು, ರಾಮನಗರಕ್ಕೆ ಏನ್ ಸಂಬಂಧ ಅಂತ ವಿರೋಧಿಗಳು ಹೇಳ್ತಾರೆ. ಆದರೆ, ಅಧಿಕಾರ ಇರಲಿ ಬಿಡಲಿ ಜನರ ಸಂಪರ್ಕ ಹೊಂದಿದ್ದೇವೆ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಮಂಡ್ಯದ ಮಧ್ಯ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಸರಣಿ ಸಭೆ ಮಾಡಿದ್ದಾರೆ. ಕನಿಷ್ಠ 25 ಸಾವಿರ ಜನಕ್ಕೆ ಉದ್ಯೋಗವಕಾಶ ಕಲ್ಪಿಸುವ ಕನಸು ಹೊಂದಿದ್ದಾರೆ ಎಂದು ನಿಖಿಲ್ ತಿಳಿಸಿದರು.