ವಿಜಯವಾಣಿ ಸುದ್ದಿಜಾಲ ಗುರುಪುರ
ಈ ವರ್ಷ ಏಪ್ರಿಲ್ ತಿಂಗಳಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸಿದ ವಾಮಂಜೂರು ತಿರುವೈಲಿನ ದ.ಕ. ಜಿಪಂ ಮಾದರಿ ಹಿರಿಯ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಭತ್ತದ ಬೇಸಾಯದ ಬಗ್ಗೆ ಸಾಮಾನ್ಯ ಜ್ಞಾನ ಒದಗಿಸುವ ನಿಟ್ಟಿನಲ್ಲಿ ನಡೆಸಿರುವ ವಿಶಿಷ್ಟ ಪ್ರಯತ್ನವೊಂದು ಕೃಷಿ ಆಸಕ್ತರ ಗಮನ ಸೆಳೆಯುತ್ತಿದೆ.
*ಮಕ್ಕಳಿಗಾಗಿ ಭತ್ತದ ಕೃಷಿ: ತಿರುವೈಲು ಶಾಲೆಯ ಶ್ರೇಯೋಭಿವೃದ್ಧಿ ಬಯಸಿರುವ ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಮತ್ತು ತಿರುವೈಲಿನ ಜೈ ಶಂಕರ್ ಮಾತೃ ಮಂಡಳಿಯ ಜಂಟಿ ಆಶ್ರಯದಲ್ಲಿ ‘ಮಕ್ಕಳಿಗಾಗಿ ಭತ್ತದ ಕೃಷಿ’ ಪರಿಕಲ್ಪನೆಯಡಿ ಈ ಕಾರ್ಯಕ್ರಮ ರೂಪುಗೊಂಡಿದೆ. ಗದ್ದೆಗಳಲ್ಲಿ ಭತ್ತ ಬೆಳೆಯುವ ಬಗ್ಗೆ ಪ್ರಾಥಮಿಕ ಹಂತದಿಂದ ಅಕ್ಕಿ ಉತ್ಪಾದಿಸುವವರೆಗಿನ ಎಲ್ಲ ಮಾಹಿತಿ ಖುದ್ದಾಗಿ ತಿಳಿದುಕೊಳ್ಳುವಂತೆ ಈಗಾಗಲೇ ಶಾಲಾ ಮೈದಾನದ ಮೂಲೆಯ ಸಣ್ಣ ಜಾಗದಲ್ಲಿ ಎರಡೂವರೆ ಸೇರು ಭತ್ತದ ಬೀಜ ಬಿತ್ತಿ ನೇಜಿ ಬೆಳೆಸಲಾಗಿದೆ. ಇದಕ್ಕೆ ಮಕ್ಕಳೇ ಸಾವಯವ ಗೊಬ್ಬರ ಹಾಕುತ್ತಿದ್ದಾರೆ. ಈಗ ನೇಜಿ ಬೆಳೆದು ನಿಂತಿದೆ. ಅಂದಾಜು ಆಗಸ್ಟ್ 2ರಂದು ಶಾಲಾ ಮಕ್ಕಳೇ ಈ ನೇಜಿ ಕಿತ್ತು ಸೂಡಿ ಮಾಡಿ ತಿರುವೈಲು ಗ್ರಾಮದ ಸಾಲ್ಯಾನ್ ಪರಿವಾರದವರು ಹದಗೊಳಿಸುವ 15 ಸೆಂಟ್ಸ್ ಗದ್ದೆಗೆ ಹೊತ್ತೊಯ್ದು ನಾಟಿ ಮಾಡಲಿದ್ದಾರೆ.
ಉಳುಮೆ ಸಂದರ್ಭ ಹಿರಿಯರಿಗೆ ಮಕ್ಕಳು ಸಹಾಯಕರಾಗಿರುತ್ತಾರೆ. ನೇಜಿಗೆ ಕೀಟನಾಶಕ ಸಿಂಪಡಿಸಲಿದ್ದಾರೆ. ಕಳೆ ಕೀಳಲಿದ್ದಾರೆ. ಮುಂದೆ ಭತ್ತದ ಪೈರು ಕಟಾವು ಮಾಡಲಿರುವ ಮಕ್ಕಳು, ಪೈರನ್ನು ಶಾಲಾ ಮೈದಾನಕ್ಕೆ ಹೊತ್ತು ತಂದು, ‘ಪಡಿ’ಯಲ್ಲಿ ಬಡಿದು ಭತ್ತ ಬೇರ್ಪಡಿಸಲಿದ್ದಾರೆ. ಬಳಿಕ ಹಲ್ಲರ್‌ಗೆ ಕೊಂಡೊಯ್ದು ಅಕ್ಕಿ ಮಾಡಿ, ಶಾಲಾ ಬಿಸಿಯೂಟಕ್ಕೆ ಬಳಸಿಕೊಳ್ಳಲಿದ್ದಾರೆ. ಇದೇ ವೇಳೆ ಪ್ರಾತ್ಯಕ್ಷಿಕೆ ಮೂಲಕ ತುಳುನಾಡಲ್ಲಿ ಕೃಷಿಕರು ಒನಕೆಯಲ್ಲಿ ಕುಟ್ಟಿ ಭತ್ತದಿಂದ ಅಕ್ಕಿ ಬೇರ್ಪಡಿಸುತ್ತಿದ್ದ ವಿಧಾನವನ್ನು ಮಕ್ಕಳು ತಿಳಿದುಕೊಳ್ಳಲಿದ್ದಾರೆ. ಕಟಾವುವರೆಗೆ ಎಲ್ಲ ಸಂದರ್ಭದಲ್ಲೂ ಮಕ್ಕಳಿಗೆ ಹಿರಿಯರ ಮಾರ್ಗದರ್ಶನವಿರುತ್ತದೆ.
ಪರಿಸರದ ನೈಜ ಅನುಭವ ಉದ್ದೇಶ
ಈಗಿನ ಮಕ್ಕಳಿಗೆ ಭತ್ತದಿಂದ ಅಕ್ಕಿ ಉತ್ಪಾದಿಸುವ ವಿಧಾನ ಹಾಗೂ ಭತ್ತದ ಕೃಷಿಯ ಒಳ-ಹೊರಗಿನ ಶ್ರಮ ತಿಳಿದಿರುವುದಿಲ್ಲ. ಈ ಕಾರಣಕ್ಕಾಗಿಯೇ ಇತ್ತೀಚಿನ ಕೆಲವು ವರ್ಷಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಮೂಡಿಸಲು ಗದ್ದೆಗಳಲ್ಲಿ ನಾಟಿ ಅನುಭವ ನೀಡಲಾಗುತ್ತಿದೆ. ಶಾಲೆಗಳಲ್ಲಿ ರಚಿಸಲಾಗುವ ಇಕೋ ಕ್ಲಬ್‌ಗಳ ಮೂಲಕ ಮಕ್ಕಳು ಪರಿಸರದ ಬಗ್ಗೆ ನೈಜ ಅನುಭವ ಪಡೆದುಕೊಳ್ಳುವ ಪ್ರಯತ್ನವಾಗಿ ಇಂತಹ ಪಠ್ಯೇತರ ಚಟುವಟಿಕೆ ಹಾಗೂ ವಿಜ್ಞಾನ ಕೇಂದ್ರಗಳ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಕರು ಹೇಳುತ್ತಾರೆ.
ಕಳೆದ ಕೆಲವು ವರ್ಷದಿಂದ ತಿರುವೈಲು ಸರ್ಕಾರಿ ಶಾಲಾ ಮಕ್ಕಳಿಗೆ ಗದ್ದೆಗಳಲ್ಲಿ ಖುದ್ದಾಗಿ ಭತ್ತದ ನಾಟಿಯ ಅನುಭವ ನೀಡಲಾಗುತ್ತಿದೆ. ಈ ವರ್ಷ ಮತ್ತಷ್ಟು ವಿಶಿಷ್ಟ ರೀತಿಯಲ್ಲಿ ಕೃಷಿ ಮಾಹಿತಿ ನೀಡಲು ಪ್ರಯತ್ನ ನಡೆದಿದೆ. ಇದಕ್ಕೆ ಎಲ್ಲರೂ ಸಹಕರಿಸಿದ್ದಾರೆ. ತಿರುವೈಲು ಶಾಲೆಯ ಭತ್ತದ ಕೃಷಿ ಜಿಲ್ಲೆಗೆ ಮಾದರಿಯಾಗಿದೆ. ಮೋಹಿನಿ, ತಿರುವೈಲು ಶಿಕ್ಷಕಿ ಅಕ್ಕಿ ಭತ್ತದಿಂದ ಬಂದರೆ ಬೆಳ್ತಿಗೆ ಎಲ್ಲಿಂದ ಬರುತ್ತೆ? ಎಂದು ಈಗಿನ ಮಕ್ಕಳು ಕೇಳುವ ಸಂದರ್ಭಗಳಿವೆ. ಈ ಬಾರಿ ಶಾಲಾ ಆವರಣದಲ್ಲೇ ಮಕ್ಕಳಿಗೆ ಭತ್ತದ ಬೀಜ ಬಿತ್ತುವುದರಿಂದ ಹಿಡಿದು ನಾಟಿ, ಕಟಾವು, ಅಕ್ಕಿ ಮಾಡುವವರೆಗಿನ ಎಲ್ಲ ಅನುಭವ ಸಿಗಲಿದೆ. ಈ ಮೂಲಕ ಮಕ್ಕಳು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬಹುದು. ಇಂತಹ ಪ್ರಯತ್ನ ಬೇರೆಲ್ಲೂ ನಡೆದಿಲ್ಲ. ಇದಕ್ಕೆ ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್, ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿ ಸಂಘ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಗೋಪಾಲ್ ಯು. ಅವರ ಸಂಪೂರ್ಣ ಬೆಂಬಲ ಸಿಕ್ಕಿದೆ. ರಘು ಸಾಲ್ಯಾನ್, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ