ಜಿಲ್ಲೆ

ನೇಜಾರು ಕೊಲೆ ಪ್ರಕರಣ ಆರೋಪಿ ಸ್ಥಳ ಮಹಜರು

ಉಡುಪಿ: ಮಲ್ಪೆಯ ನೇಜಾರಿನ ತೃಪ್ತಿ ನಗರದ ಮನೆಯಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆಯ ಪ್ರಕರಣಕ್ಕೆ ಸಂಭಂದಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬಂಧಿತ ಆರೋಪಿ ಪ್ರವಿಣ್​ ಅರುಣ್​ ಚೌಗಲೆಯನ್ನು ಗುರುವಾರ ಸಾಯಂಕಾಲ ಸ್ಥಳ ಮಹಜರಿಗಾಗಿ ಕೃತ್ಯ ನಡೆದ ಮನೆಗೆ ಕರೆ ತಂದಿದ್ದಾರೆ.

ಬೆಳಗ್ಗೆಯಿಂದಲೇ ಮನೆ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಯನ್ನು ಕರೆ ತರುತ್ತಿದ್ದಂತೆ ಪೋಲಿಸ್​ ವಾಹನದ ಕಡೆಗೆ ನುಗ್ಗಲು ಯತ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು. ಮಹಜರು ನಡೆಸುವ ವೇಳೆ ಆರೋಪಿಯನ್ನು ತಮ್ಮಕೈಗೆ ಒಪ್ಪಿಸುವಂತೆ ಒತ್ತಾಯಿಸಿದ್ದ ಆಕ್ರೋಶಿತ ಗುಂಪು, ಆತನಿಗೆ ಬದುಕುವ ಹಕ್ಕು ಇಲ್ಲ ಎಂದು ಘೋಷಣೆ ಕೂಗಿದರು. ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ. ಆತ ನಾಲ್ವರ ಕೊಲೆಗೆ 15 ನಿಮಿಷ ತೆಗೆದುಕೊಂಡಿದ್ದಾನೆ. ನಮಗೆ 30 ಸೆಕೆಂಡು ಅವನನ್ನು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸು ಕರೆದುಕೊಂಡು ಹೋಗುವ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಆಕ್ರೋಶಿತ ಗುಂಪು ಆರೋಪಿಯ ಮೇಲೆ ದಾಳಿಗೆ ಯತ್ನಿಸಿತು. ಈ ವೇಳೆ ಪೊಲೀಸರು ಲು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ನಂತರ ಯುವಕರ ಗುಂಪು ರಸ್ತೆ ತಡೆ ನಡೆಸಿತು.

ಜನಾಕ್ರೋಶದ ನಡುವೆ ಮಹಜರು ಪ್ರಕ್ರಿಯೆಯನ್ನು ಮುಗಿಸಿ, ಸುರಕ್ಷಿತವಾಗಿ ಆರೋಪಿಯನ್ನು ವಾಪಾಸು ಕರೆದುಕೊಂಡು ಹೋಗುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಮುಸ್ಲಿಂ ಮುಖಂಡರ ಸಭೆ
ಗುರುವಾರ ಸಾಯಂಕಾಲ ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರ ಸಭೆ ನಡೆಯಿತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿ ಬಗ್ಗೆ ಎಸ್ಪಿ ಡಾ. ಅರುಣ್​ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್​ ಅಭಿನಂದನೆ
ನೇಜಾರುವಿನಲ್ಲಿ ನಡೆದ ಅಮಾನುಷ ಕೊಲೆ ಪ್ರಕರಣ ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಜಿಲ್ಲಾ ಪೊಲೀಸ್​ ಇಲಾಖೆಗೆ ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಪೊಲೀಸ್​ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಳ್ಳದಂತೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಭೇದಿಸಿ ಆರೋಪಿಯನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಗ್ಗೆ ಮುಖಂಡರು ಶ್ಲಾಘಿಸಿದ್ದಾರೆ. ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​, ಮುಖಂಡರಾದ ಪ್ರಸಾದ್​ ರಾಜ್​ ಕಾಂಚನ್​, ಪ್ರಖ್ಯಾತ್​ ಶೆಟ್ಟಿ ಮೊದಲಾದವರಿದ್ದರು.