ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ಅವರ ನೂತನ ಶಾಸಕರ ಕಚೇರಿಗೆ ಲೋಕಸಭಾ ಸದಸ್ಯಬಿ.ವೈ.ರಾಘವೇಂದ್ರ ಅವರ ಜತೆಗೆ ಭೇಟಿ ನೀಡಿದರು.
ನೂತನ ಶಾಸಕರ ಕಚೇರಿ ತೆರೆದಿರುವುದರಿಂದ ಜನತೆಗೆ ಅನುಕೂಲವಾಗಲಿದ್ದು ಜನರು ತಮ್ಮ ಅಹವಾಲುಗಳನ್ನು ತೋಡಿಕೊಳ್ಳಲು, ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲವಾಗುತ್ತದೆ. ಕಚೇರಿಯು ಜನರ ಮತ್ತು ಶಾಸಕರ ನಡುವೆ ಸೇತುವೆಯಾಗಲಿದೆ ಎಂದರು.
ಶಿಕಾರಿಪುರದ ಮಹಾಜನತೆಯ ಆಶೀರ್ವಾದದಿಂದ ನಾನು ಪುರಸಭೆ ಸದಸ್ಯನಾಗಿ ಶಾಸಕನಾಗಿ, ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ನಾಲ್ಕುಬಾರಿ ಮುಖ್ಯಮಂತ್ರಿಯಾದೆ. ನಿರಂತರವಾಗಿ ಐದು ದಶಕಗಳಿಂದ ನಮ್ಮನ್ನು ಬೆಳೆಸಿದ್ದಾರೆ. ಪ್ರೀತಿ, ವಿಶ್ವಾಸ ನಂಬಿಕೆಗಳ ಧಾರೆ ಎರೆದಿದ್ದಾರೆ. ಜನರ ನಂಬಿಕೆಗಳೇ ನಮಗೆ ಸದಾ ಶ್ರೀರಕ್ಷೆಯಾಗಿದೆ. ಶಿಕಾರಿಪುರ ತಾಲೂಕನ್ನು ಅಭಿವೃದ್ಧಿ ಮಾಡುವ ಕನಸು ಈಗ ನನಸಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ತಾಲೂಕುಗಳಲ್ಲಿ ಶಿಕಾರಿಪುರ ತಾಲೂಕು ಕೂಡ ಒಂದು. ಜನತೆಯ ನಿರೀಕ್ಷೆಗಳಿಗೆ, ಜನತೆಯ ಆಶಯಗಳಿಗೆ ಸದಾ ಸ್ಪಂದಿಸಬೇಕು ಎಂದು ಹೇಳಿದರು.