ಬೋರಗಾಂವ: ಮಾಣಕಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆ, ನೆರೆಯಿಂದ ಹಾನಿಯಾಗಿರುವ ಮನೆ, ಬೆಳೆಹಾನಿ ಸರ್ವೇಯಲ್ಲಿ ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳು ತಾರತಮ್ಮ ಮಾಡಿದ್ದಾರೆ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಗ್ರಾಪಂ ಸದಸ್ಯ ವಿಠ್ಠಲ ಕಟ್ಟೇಕರ ಮಾತನಾಡಿ, ಬೆಳೆಹಾನಿ ಪರಿಹಾರಕ್ಕೆ ಸರ್ಕಾರದಿಂದ ಪರಿಹಾರ ಸಿಗಲು ಅನೇಕ ಬಡ ರೈತರು ಅರ್ಹರಿರುವಾಗ ಗ್ರಾಮಲೆಕ್ಕಾಧಿಕಾರಿ, ಸಹಾಯಕ ಇಬ್ಬರೂ ಸೇರಿ ಹಾನಿ ಬಗ್ಗೆ ಸರ್ವೇ ಮಾಡದೆ ಕಚೇರಿಯಲ್ಲೇ ಕುಳಿತು ಕೆಲಸ ನಿರ್ವಹಿಸಿದ್ದಾರೆ. ಇದರಿಂದ ಯೋಗ್ಯ ರೈತನಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಸಚಿನ್ ಚೌಗುಲೆ ಮಾತನಾಡಿ, ಮಳೆಯಲ್ಲಿ ಅನೇಕ ಮನೆಗಳು ಬಿದ್ದಿವೆ. ಮನೆ ಹಾನಿಯ ಸರ್ವೇ ಮಾಡುವುದರಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ತಹಸೀಲ್ದಾರ್ ಗಾಯಕವಾಡ ಅವರನ್ನು ಕೇಳಿದರೂ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ಬಡವರಿಗೆ ಅನ್ಯಾಯವಾಗಿದ್ದು, ಮತ್ತೆ ಮರು ಸರ್ವೇ ಮಾಡಿ ಅರ್ಹರಿಗೆ ಪರಿಹಾರ ನೀಡಬೇಕು. ಅಲ್ಲದೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಪಂ ಎದುರು ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷ ಉತ್ತಮ ಬನ್ನೆ ಮಾತನಾಡಿ, ಮಾಣಕಾಪುರ ಗ್ರಾಮದ ನೆರೆ ಸಂತ್ರಸ್ತರ ಹಾನಿ ಬಗ್ಗೆ ಸ್ಥಳೀಯ ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಅನೇಕ ಬಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ, ಈ ಬಗ್ಗೆ ತಹಸೀಲ್ದಾರ್‌ಗೆ ಮನವಿ ಮಾಡಲಾಗಿದೆ. ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಗ್ರಾಪಂ ಸದಸ್ಯ ಪ್ರಮೋದ ಅರಗೆ, ಅಭಯ ಚೌಗುಲೆ, ಸುನೀಲ ಮಾಕಾಳೆ, ಪ್ರಭಾಕರ ನಿನಗುರೆ, ಪ್ರವೀಣ ದೇಸಾಯಿ ಇದ್ದರು.