ಬೆಳಗಾವಿ: ಎರಡು ವರ್ಷದಿಂದ ಸತತ ಪ್ರವಾಹಕ್ಕೆ ತುತ್ತಾಗುತ್ತಿರುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ರಾಮದುರ್ಗ ತಾಲೂಕಿನ ಕಿಲಬನೂರ ಗ್ರಾಮದ ಸಂತ್ರಸ್ತರು ಶಾಸಕ ಮಹಾದೇವಪ್ಪ ಯಾದವಾಡ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ಇದರಲ್ಲಿ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಸತತ ಪ್ರವಾಹದಿಂದಾಗಿ ಎಲ್ಲವನ್ನೂ ಕಳೆದುಕೊಂಡ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಕಿಲಬನೂರ ಗ್ರಾಮವೊಂದರಲ್ಲಿಯೇ 150ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಸರ್ಕಾರ ನಮಗೆ ಪರಿಹಾರ ಕೊಡುವುದು ಬೇಡ. ಶಾಶ್ವತವಾಗಿ ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಕಲ್ಪಿಸಿಕೊಡಿ ಎಂದು ವಿನಂತಿಸಿದರು.
300 ಕೋಟಿ ರೂ. ಹಾನಿ: ಈ ವೇಳೆ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಮಲಪ್ರಭಾ ಪ್ರವಾಹದಿಂದ ರಸ್ತೆ, ಫಸಲು ಸೇರಿ ರಾಮದುರ್ಗ ತಾಲೂಕಿನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ನಷ್ಟದ ಕುರಿತು ಅಗತ್ಯ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು, ಮುಖ್ಯಮಂತ್ರಿ ಅವರು ಆಗಮಿಸಿದ ವೇಳೆಯೂ ನೆರೆ ಪರಿಹಾರ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದರು.
9 ಗ್ರಾಮಕ್ಕೆ ಸಮಸ್ಯೆ: ನದಿ ತೀರದ 9 ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕಿದೆ. ಅದಕ್ಕೆ ಜಾಗೆಯ ಸಮಸ್ಯೆ ಇದೆ. ಅರಣ್ಯ ಪ್ರದೇಶದ ಜಾಗವನ್ನು ಪಡೆದುಕೊಂಡು ಗ್ರಾಮಗಳ ಸ್ಥಳಾಂತರ ಮಾಡಬೇಕಾಗಿದೆ. ಈ ಪ್ರಕ್ರಿಯೆಗೆ ತೊಡಕಾಗುವ ತಾಂತ್ರಿಕ ತೊಂದರೆ ನಿವಾರಣೆ ಮಾಡಲು ಜಿಲ್ಲಾಧಿಕಾರಿಗಳಾದ ತಾವು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತಪ್ಪ ಚಾಲಾರ, ಶಿವನಗೌಡ ಲಕ್ಕನಗೌಡರ, ಪುಂಡಲೀಕಪ್ಪ ಚೌಡಕಿ, ಶಂಕರ ದೊಡಮನಿ, ಪ್ರಭು ಬಾಳಿಕಾಯಿ ಮತ್ತಿತರರು ಇದ್ದರು.