ಸದಲಗಾ ಬಳಿ ದೂಧಗಂಗಾ ನದಿ ನೀರಿನ ಮಟ್ಟವನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಪರಿಶೀಲಿಸಿದರು. ರಾಮಗೊಂಡಪಾಟೀಲ, ಪುರಸಭೆ ಸದಸ್ಯ ಹೇಮಂತ ಶಿಂಗೆ, ಲಕ್ಷ್ಮೀಕಾಂತ ಹಲಪ್ಪಣ್ಣವರ, ಆನಂದ ಪಾಟೀಲ, ಅಭಿನಂದನ ಪಾಟೀಲ, ಭರತ ಬೋರಗಾಂವೆ, ರಾಜು ಅಮೃತಸಣ್ಣವರ, ಉದಯಕುಮಾರ ಪಾಟೀಲ ಇದ್ದರು. 
ಜಿಲ್ಲೆ

ನೆರೆ ಎದುರಿಸಲು ಜಿಲ್ಲಾಡಳಿತ ಸಿದ್ಧ

ಬೋರಗಾಂವ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಐದು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ. ಸಮೀಪದ ಸದಲಗಾ-ಜನವಾಡ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ದೂಧಗಂಗಾ ನದಿ ನೀರಿನ ಮಟ್ಟ ಪರಿಶೀಲಿಸಿ ಮಾತನಾಡಿದ ಅವರು, ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದೂಧಗಂಗಾ, ವೇದಗಂಗಾ ನದಿ ನೀರಿನ ಮಟ್ಟ ಏರುತ್ತಿದೆ. ದೂಧಗಂಗಾ ಹಾಗೂ ಕೃಷ್ಣಾ ನದಿಗೆ ನೀರು ಬಿಡುವ ಕುರಿತು ಕೊಲ್ಲಾಪುರ- ಸಾಂಗಲಿ ಜಿಲ್ಲಾಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮಳೆಯಿಂದ ಯಾವುದೇ ಅನಾಹುತ ಆಗದಂತೆ ನೋಡಿಕೊಂಡು ಎಲ್ಲರ ಕಾಳಜಿ ವಹಿಸಲಾಗುವುದು ಎಂದರು.

ಜಲಾವೃತಗೊಂಡ ಬ್ರಿಡ್ಜ್‌ಗಳ ಮೇಲೆ ಸಂಚಾರ ನಿಷೇಧಿಸಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಜೊಲ್ಲೆ ಹೇಳಿದರು. ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಮಗೊಂಡ ಪಾಟೀಲ, ಪುರಸಭೆ ಸದಸ್ಯ ಹೇಮಂತ ಶಿಂಗೆ, ಲಕ್ಷ್ಮೀಕಾಂತ ಹಲಪ್ಪಣ್ಣವರ, ಆನಂದ ಪಾಟೀಲ, ಅಭಿನಂದನ ಪಾಟೀಲ, ಭರತ ಬೋರಗಾಂವೆ, ರಾಜು ಅಮೃತಸಣ್ಣವರ, ಉದಯಕುಮಾರ ಪಾಟೀಲ, ಕೇತನ ಪಾಟೀಲ, ದಾದಾ ಭಾದುಲೆ, ಬಾಳಗೊಂಡ ಪಾಟೀಲ, ಮಹಾವೀರ ಉದಗಾವೆ ಇತರರು ಉಪಸ್ಥಿತರಿದ್ದರು.