ಜಿಲ್ಲೆ

ನೆರೆಗೆ ನರಕವಾದ ಬದಕು !

Mysuru - Desk - Naveen Kumar H P

ಹೊಳೆನರಸೀಪುರ : ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿಯಿಂದ ಅಧಿಕ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಕುವೆಂಪು ಬಡಾವಣೆ, ಯಾಸಿನ್ ನಗರ, ಚನ್ನರಾಯಪಟ್ಟಣ ಮಾರ್ಗದ ರಸ್ತೆ, ಹೊಳೆದಂಡೆಯ ಸ್ಮಶಾನಕ್ಕೆ ತೆರಳುವ ಮಾರ್ಗ, ಅಗ್ನಿಶಾಮಕ ಠಾಣೆಯ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ, ಅರಕಲಗೂಡು ಮಾರ್ಗದ ರಸ್ತೆ ಪ್ರದೇಶಗಳು ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ.
ಕುವೆಂಪು ಬಡಾವಣೆಯ ನೆಲ ಅಂತಸ್ತಿನ ಮನೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ನೆರೆ ಯಾವಾಗ ಬರುತ್ತದೆ ಎಂಬ ಭಯದಲ್ಲೇ ದಿನ ಕಳೆಯುವಂತಾಗಿದೆ. ಈ ಬಡಾವಣೆಯಲ್ಲಿ ಒಳಚರಂಡಿ ಶುದ್ಧೀಕರಣ ಘಟಕವಿದ್ದು, ನೀರು ತುಂಬಿದೆ. ನದಿ ನೀರಿನ ಜತೆ ಒಳಚರಂಡಿ ನೀರು ಸೇರ್ಪಡೆಗೊಳ್ಳುತ್ತಿದೆ.


ವಾರಗಳ ತನಕ ಮನೆಗಳ ಸುತ್ತ ನೀರು ತುಂಬಿರುವುದಿಂದ ಕಟ್ಟಡಗಳು ಶಿಥಿಲವಾಗುತ್ತಿವೆ. ಪಟ್ಟಣದಿಂದ ಚನ್ನರಾಯಪಟ್ಟಣಕ್ಕೆ ತೆರಳುವ ಮಾರ್ಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಈ ಭಾಗದಲ್ಲಿ ಮೂರರಿಂದ ನಾಲ್ಕು ಅಡಿ ನೀರು ನಿಂತಿದ್ದು, ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸಲಾಗದ ಸ್ಥಿತಿ ಇದೆ.


ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ. ಡೆಂೆ ಪ್ರಕರಣಗಳು ಹೆಚ್ಚಾಗುವ ಭಯ ಎದುರಾಗಿದೆ. ಪಟ್ಟಣದ ಆರ್.ಬಿ.ರಸ್ತೆಯ ಯಾಸಿನ್ ನಗರ ನೆರೆ ಪೀಡಿತವಾಗಿದ್ದು, ಅಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಪಟ್ಟಣದ ಅಗ್ನಿಶಾಮಕ ಠಾಣೆ ಸಂಪೂರ್ಣ ಜಲಮಯವಾಗಿದೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಪರದಾಡುತ್ತಿದ್ದಾರೆ. ಅಗ್ನಿಶಾಮಕ ವಾಹನಗಳನ್ನು ಬೇರೆ ಸ್ಥಳಗಳಲ್ಲಿ ನಿಲ್ಲಿಸಬೇಕಾಗದ ಅನಿವಾರ್ಯತೆ ಇದೆ. ಅಗ್ನಿಶಾಮಕ ಠಾಣೆಯ ಸಮೀಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.


ಪಟ್ಟಣದಿಂದ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಹಾಗೂ ಅರಕಲಗೂಡು ರಸ್ತೆ ಮಾರ್ಗವಾಗಿ ತೆರಳುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ಬೇರೆ ಮಾರ್ಗವನ್ನು ಅವಲಂಬಿಸಿ ಸಂಚರಿಸುವಂತಾಗಿದೆ. ಪಟ್ಟಣದ ಬಡಾವಣೆಗಳು ಅಲ್ಲದೆ ನದಿ ತಟದಲ್ಲಿ ಬರುವ ಕಡವಿನ ಹೊಸಹಳ್ಳಿ ಕಡವಿನಕೋಟೆ, ಮೂಡಲಹಿಪ್ಪೆ ಜಕ್ಕುವಳ್ಳಿ ಇತರ ಗ್ರಾಮಗಳ ರೈತರ ಜಮೀನಿನಲ್ಲಿ ನೀರು ತುಂಬಿ ಬೆಳೆಗಳ ನಾಶವಾಗಿದೆ. ಅತಿವೃಷ್ಟಿಯಿಂದ ಅನ್ನದಾತರು ಸಂಕಷ್ಟದಲ್ಲಿದ್ದಾರೆ.

ನೆರೆಪೀಡಿತ ಪ್ರದೇಶಗಳ ನಾಗರಿಕರ ರಕ್ಷಣೆಗೆ ತಾಲೂಕು ಆಡಳಿತ ಸದಾ ಸಜ್ಜಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆಯಿಂದ ಕರ್ತವ್ಯದಲ್ಲಿ ತೊಡಗಿದ್ದಾರೆ. ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಸಂಭವಿಸಿರುವ ಸಮಸ್ಯೆಗಳ ಮಾಹಿತಿಗಳನ್ನು ಪಡೆಯಲಾಗುತ್ತಿದೆ.
ಕೆ.ಕೆ.ಕೃಷ್ಣಮೂರ್ತಿ, ತಹಸೀಲ್ದಾರ್, ಹೊಳೆ ನರಸೀಪುರ.