ಜಿಲ್ಲೆ

ಆರ್ಥಿಕ ತಜ್ಞರಾಗಿದ್ದರೂ ಅಂಬೇಡ್ಕರ್‌ಗೆ ನೆಹರೂ ಅನ್ಯಾಯ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಅರ್ಥಶಾಸ್ತ್ರದಲ್ಲಿ ಪಾಂಡಿತ್ಯ ಸಂಪಾದಿಸಿದ್ದರೂ ನೆಹರೂ ಅವರು ಆರ್ಥಿಕ ಖಾತೆ ಕೊಡದೆ ಅನ್ಯಾಯ ಮಾಡಿದರು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕೊಡಗಿನ ರಂಗಭೂಮಿ ಟ್ರಸ್ಟ್‌ನಿಂದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ್ಪ ಅವರ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾತಂತ್ರ್ಯದ ನಂತರ ಒಂದೇ ವರ್ಗ, ಒಂದೇ ಗುಂಪು ಬರೆದ ಇತಿಹಾಸವನ್ನು ಓದುತ್ತ ಬಂದಿದ್ದೇವೆ. ಆದರೆ ಇತಿಹಾಸ ಸರಳ ಅಲ್ಲ. ಬೇರೆ ಬೇರೆ ದೃಷ್ಟಿಕೋನ ಇದ್ದು ಅದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಅಲ್ಲದೇ ಬೇರೆ ವ್ಯಕ್ತಿಗಳು ಸ್ವಾತಂತ್ರ್ಯ ಕೊಡುಗೆ ನೀಡಿದ್ದಾರೆ. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಒಬ್ಬರು ಎಂದರು.

ಉತ್ತಮ ಆರ್ಥಿಕ ತಜ್ಞರಾಗಿದ್ದ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿಲ್ಲ್ಲ. ಇಂತಹ ಅನ್ಯಾಯ ಅವರ ಜೀವನದಲ್ಲಿ ಬಹಳಷ್ಟು ಅಗಿರುವುದು ನಿಜ. ಹೋರಾಟದ ಮೂಲಕ ಅಡ್ಡಂಡ ಕಾರ್ಯಪ್ಪ ಇಂತಹ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದಾರೆ ಎಂದರು.

ಪಾಶ್ಚಿಮಾತ್ಯ ಅಲೋಚನೆಗಳು ಭಾರತದಲ್ಲಿ ಜಾರಿಗೆ ಬರಬಾರದು. ಭಾರತೀಯ ಪರಂಪರೆಯ ಸ್ವದೇಶಿ ಅಲೋಚನೆಗಳು ಮುಂದುವರಿಯಬೇಕು. ಹೀಗಾಗಿ ಸತ್ಯಾಂಶಗಳನ್ನು ಜನರ ಮುಂದಿಡಬೇಕು. ಕಲೆಯ ಮೂಲಕ ಇತಿಹಾಸ ಹೇಳುತ್ತಿರುವುದು ಒಳ್ಳೆಯ ಕೆಲಸ. ನಾಟಕವನ್ನು ಹೆಚ್ಚಿನ ಜನರು ನೋಡಬೇಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಮೈಸೂರಿನ ಸಂಸ್ಥಾನಕ್ಕೆ ಬಂದಿಲ್ಲ. ಆದರೆ ಸಂವಿಧಾನ ರಚನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೆಲಸಗಳು ಪ್ರೇರಣೆ ಎಂದಿದ್ದರು. 1818ರಲ್ಲಿ ಮೀಸಲಾತಿ, ದರ್ಬಾರ್‌ನಲ್ಲಿ ದಲಿತರಿಗೆ ಅವಕಾಶದ ಸನ್ನಿವೇಶಗಳನ್ನು ಅವರು ಉಲ್ಲೇಖಿಸಿರುವ ಸಂಗತಿಗಳಿವೆ. ಇದು ನಮ್ಮ ರಾಜವಂಶಸ್ಥರನ್ನು ಹೊಗಳಲು ಹೇಳುತ್ತಿಲ್ಲ. ಇಂತಹ ಆಶಯಗಳ ಚೌಕ್ಕಟ್ಟಿನಲ್ಲಿ ಸಮಾಜ ಮುಂದುವರಿಯಬೇಕು ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಲೇಖಕ ವಾದಿರಾಜ್, ನಿಜ ಮಹಾತ್ಮ ಬಾಬಾ ಸಾಹೇಬ್ ನಾಟಕ ಕೃತಿಯು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ವಾಗ್ವಾದ, ಮಾತುಕತೆಯಹಿನ್ನೆಲೆ ಮುನ್ನೆಲೆ ಇದೆ. ಈ ಸಂವಾದದಲ್ಲಿ ಮಹಾತ್ಮ ಯಾರು? ಎಂಬ ಪ್ರಶ್ನೆಯನ್ನು ಎತ್ತುವುದರ ಜತೆಗೆ ಉತ್ತರವನ್ನು ತೆರೆದಿಡಲಿದೆ ಎಂದರು.

ದುಂಡು ಮೇಜಿನ ಸಭೆಯ ಚರ್ಚೆಗಳು, ಹೋರಾಟಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧ, ಸಾರ್ವಕರ್ ಜತೆಗೆ ಮಾತುಕತೆ, ಗಾಂಧಿ ಕಾಂಗ್ರೆಸ್ ಅಸ್ಪಶ್ಯರಿಗೆ ಏನು ಮಾಡಿತು. ಪಾಕಿಸ್ತಾನದ ನಿಲುವುಗಳು, ದೇಶದ ಸಂವಿಧಾನ ಸಭೆಯ ಚರ್ಚೆಗಳನ್ನು ರಂಗದ ಮೇಲೆ ಕಾರ್ಯಪ್ಪ್ಪ ತಂದಿದ್ದಾರೆ ಎಂದರು.

ಲೇಖಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಧರ್ಮದ ಆಧಾರದಲ್ಲಿ ದೇಶ ವಿಭಜನೆ ಹೊಂದಿದ ಮೇಲೆ ಮುಸ್ಲಿಮರು ಎಲ್ಲರೂ ದೇಶ ಬಿಟ್ಟು ಹೋಗಬೇಕು ಎಂದು ಅಂಬೇಡ್ಕರ್ ಥಾಟ್ಸ್ ಆಫ್ ಪಾಕಿಸ್ತಾನ ಕೃತಿಯಲ್ಲಿ ಹೇಳಿದ್ದಾರೆ ಎಂದರು.

ವಿಭಜನೆ ಬಳಿಕ ಇಲ್ಲಿ ಉಳಿಯುವ ಮುಸ್ಲಿಮರು ದೇಹದಲ್ಲಿ ಉಳಿದ ದುರ್ಮಾಂಸ ಎಂದು ಹೇಳಿದ್ದರು. ಇದನ್ನು ನಾನು ಈಗ ಹೇಳಿದರೆ ಉಗ್ರ ಹಿಂದುತ್ವವಾದಿ ಪಟ್ಟ ಕಟ್ಟುತ್ತಾರೆ. ಹಾಗಂತ ನಾನು ಸತ್ಯ ಹೇಳಲು ಹೆದರುವುದಿಲ್ಲ ಎಂದರು.

ಪುಸ್ತಕ ರೂಪದಲ್ಲಿ ಇರುವ ಈ ಪುಸ್ತಕ ನಾಟಕ ಅ. 13, 14, 16 ರಂದು ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಿರಿಯ ಸಮಾಜ ಸೇವಕ ವೆಂಕಟರಾಮ್ ಮಾತನಾಡಿ, ಗಾಂಧಿ, ವಿವೇಕರನ್ನು ಜಾತಿಯಿಂದ ನೋಡೊಲ್ಲ. ಹಾಗೇ ಅಂಬೇಡ್ಕರ್ ಅವರನ್ನೂ ಜಾತಿಯಿಂದ ನೋಡಬಾರದು. ಆ ನಿಟ್ಟಿನಲ್ಲಿ ಅಂಬೇಡ್ಕರ್ ಅ ವಿಚಾರಗಳನ್ನು ಎಲ್ಲರಿಗೂ ಪಸರಿಸಿ ಸಾಮರಸ್ಯ ಸ್ಥಾಪಿಸಬೇಕಿದೆ. ಸಮಾಜವನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ಯವ ಹಾದಿಗೆ ಈ ಪುಸ್ತಕ ಬೆಳಕಾಗಲಿದೆ ಎಂದರು.

ಆದಿತ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಚಂದ್ರಶೇಖರ್, ಅಖಿಲ ಭಾರತ ಸಾಹಿತ್ಯ ಪರಿಷದ್‌ನ ಅಧ್ಯಕ್ಷ ಎನ್.ಸುಬ್ರಹ್ಮಣ್ಯ, ಪರಿಷದ್‌ನ ವಲಯ ಪ್ರಮುಖ ಡಾ.ವಿ.ರಂಗನಾಥ್, ರಂಗಭೂಮಿ ಟ್ರಸ್ಟ್‌ನ ಕಾರ್ಯದರ್ಶಿ ಅನಿತಾ ಕಾರ್ಯಪ್ಪ ಇದ್ದರು.