ಜಿಲ್ಲೆ

ಯುವ ಜನತೆಯಿಂದ ದೇಶ ಸದೃಢ: ಶೋಭಾ ಕರಂದ್ಲಾಜೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶವನ್ನ ಆರ್ಥಿಕ, ಸಾಮಾಜಿಕ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟ್ರವನ್ನಾಗಿ ಮಾಡುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬುಧವಾರ ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು. ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಉತ್ತಮ ಸಾಧನೆ ಮಾಡುವಂತಾಗಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃಧ್ದಿ ಯುವಜನರಿಂದ ಸಾಧ್ಯವಾಗಲಿದ್ದು, ವಿಶ್ವದಲ್ಲಿ ಎಲ್ಲಾ ರಂಗದಲ್ಲೂ ಭಾರತವನ್ನು ಮುಂಚೂಣಿಗೆ ತರುವ ಮಹತ್ತರ ಜವಾಬ್ದಾರಿ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗಬೇಕು. ಯುವ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಆ ಮೂಲಕ ನಮ್ಮ ಆಚಾರ- ವಿಚಾರಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾನವ ಸಂಪನ್ಮೂಲ ದೇಶದ ಸಂಪತ್ತು. ಛಲದ ಬಲದಿಂದ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ನೆಹರು ಯುವ ಕೇಂದ್ರ ಮಾಡುತ್ತಿದೆ. ಪರೀಕ್ಷೆೆಯಲ್ಲಿ ಸೋತರೂ ಬದುಕಲ್ಲಿ ಗೆಲ್ಲುವ ಛಲ ಇರಬೇಕು ಎಂದರು.

ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಜಿಲ್ಲಾ ಯುವ ಅಧಿಕಾರಿ ಯಶ್ವಂತ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಪ್ರತಿಜ್ಞಾ ವಿಧಿ ಭೋಧಿಸಿದರು. ಯುವ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೇ, ಕವನ ಬರವಣಿಗೆ ಸ್ಪರ್ದೇ, ನೃತ್ಯ ಸ್ಪರ್ಧೆ,ಭಾಷಣ ಸ್ಪರ್ಧೆ ನಡೆಯಿತು.