ಜಿಲ್ಲೆ

ದೇಶದ ಏಳ್ಗೆಗೆ ಎಲ್ಲರ ಕೊಡುಗೆ ಅಗತ್ಯ, ತಹಸೀಲ್ದಾರ್ ಕಲಗೌಡ ಪಾಟೀಲ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ದೇಶದ ಏಳ್ಗೆಯಲ್ಲಿ ಪ್ರತಿಯೊಬ್ಬರ ಕೊಡುಗೆ ಅಗತ್ಯವಾಗಿದೆ ಎಂದು ನಗರ ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.

ಇಲ್ಲಿಯ ನೆಹರು ಮೈದಾನದಲ್ಲಿ ಶುಕ್ರವಾರ ತಾಲೂಕಾಡಳಿತದಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತಿತ, ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ. ಎಲ್ಲ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ, ಮೂಲಭೂತ ಹಕ್ಕುಗಳು ಇವೆ ಎಂದರು.

ಬೆಳೆ ಹಾನಿಯಾದ ರೈತರಿಗೆ ನೇರವಾಗಿ ಖಾತೆಗೆ ಹಣ ಜಮಾ ಮಾಡಿದೆ. ರೈತ ಮಕ್ಕಳಿಗೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಂದು ಕುಟುಂಬವನ್ನು ಹಸಿವು ಮುಕ್ತವಾಗಿಸುವ ನಿಟ್ಟಿನಲ್ಲಿ ಆಹಾರ ಭದ್ರತೆಯನ್ನು ಒದಗಿಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. 50 ಕೋಟಿ ಜನಧನ್ ಖಾತೆ ತೆರೆಯಲಾಗಿದೆ ಎಂದರು.

ಪೊಲೀಸ್, ಗೃಹ ರಕ್ಷಕ ದಳಗಳು ಆಕರ್ಷಕ ಪಥ ಸಂಚಲನ ನಡೆಸಿದವು. ವಿವಿಧ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಪ್ರೊಬೆಷನರಿ ತಹಸೀಲ್ದಾರ ದೀಪಾ, ಅಕ್ಷತಾ, ಎಸಿಪಿಗಳಾದ ವಿಜಯಕುಮಾರ್ ಟಿ, ಬಿಲ್ಲಪ್ಪ, ಇನ್ಸಪೆಕ್ಟರ್ ಎಂ.ಎಂ. ತಹಶೀಲ್ದಾರ, ಪರಮಾನಂದ ಶಿವಳ್ಳಿಮಠ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಶಿಕ್ಷಕರು, ವಿದ್ಯಾಥಿರ್ಗಳು ಹಾಗೂ ಇತರರು ಉಪಸ್ಥಿತರಿದ್ದರು.