- ಹುಬ್ಬಳ್ಳಿ: ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಬೆನ್ನಲ್ಲೇ ಇದೇ ಮಾದರಿ ಕೊಲೆ ಮಾಡುವ ಬೆದರಿಕೆ ಪತ್ರಗಳು ಕೆಲವರಿಗೆ ಬರುತ್ತಿವೆ.
ಅಂಜಲಿ ಹಂತಕ ಗಿರೀಶ ಸಾವಂತ, ನೇಹಾ ಹಿರೇಮಠ ಮಾದರಿಯಲ್ಲಿ ಕೊಲೆ ಮಾಡುವ ಬೆದರಿಕೆಯೊಡ್ಡಿ ಕೊಲೆ ಮಾಡಿದ್ದ. ಈಗ ನೇಹಾ ಹಾಗೂ ಅಂಜಲಿ ಮಾದರಿಯಲ್ಲಿಯೇ ಕೊಲೆ ಮಾಡುವುದಾಗಿ ನಗರದ ಶಿಕ್ಷಕಿಯೊಬ್ಬರಿಗೆ ಅನಾಮಿಕನೊಬ್ಬ ಬರೆದ ಪತ್ರ ಬಂದಿದೆ. ಶಿಕ್ಷಕಿ ದೀಪಾ ಅಡವಿಮಠ ಅವರಿಗೆ ಪತ್ರ ಬರೆದಿರುವ ಅನಾಮಿಕ, ‘ದೀಪಾ, ನಿನ್ನ ಹತ್ಯೆ ನೇಹಾ ಮತ್ತು ಅಂಜಲಿ ಹಾಗೆ ಕೆಲವೇ ದಿನ’ ಎಂದಿದ್ದಾನೆ. ಇದರಿಂದ ಗಾಬರಿಯಾಗಿರುವ ಶಿಕ್ಷಕಿ, ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಶಿಕ್ಷಕಿಯು ವೆಂಕಟೇಶ್ವರ ಕಾಲನಿಯ ರೋಟರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 28ರಂದು ಬೆಳಗ್ಗೆ ಪೋಸ್ಟ್ ಮೂಲಕ ಬಂದಿರುವ ಪತ್ರವನ್ನು ಪೋಸ್ಟ್‌ಮನ್ ತಲುಪಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾ ಅಥವಾ ಉದ್ದೇಶಪೂರ್ವಕವೇ? ಎಂಬುದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.