ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿಗೆ ನಡೆದಿರುವ ಹೋರಾಟದ ಸ್ಥಳಕ್ಕೆ ವಿಜಯಪುರ ಪಿಡಬ್ಲುೃಡಿ ಇಇ ರಾಜು ಮುಜುಮ್‌ದಾರ್ ಭೇಟಿ ನೀಡಿ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿದರು. ಪಿಎಸ್ ಆರೀಫ ಮುಶಾಪುರಿ, ರಾಜು ಚವ್ಹಾಣ ಇದ್ದರು. 
ಜಿಲ್ಲೆ

ಪಿಡಬ್ಲೂಡಿ ಅಧಿಕಾರಿಗಳ ಸಂಧಾನ ವಿಫಲ

ದತ್ತಾತ್ರೇಯ ಪಿ ಕುಲಕರ್ಣಿ

ಮುದ್ದೇಬಿಹಾಳ: ಪಟ್ಟಣದ ಮಹೆಬೂಬ ನಗರದ ವ್ಯಾಪ್ತಿಯಲ್ಲಿ ಬರುವ ನಾಲತವಾಡ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

ಏತನ್ಮಧ್ಯೆ ಮಂಗಳವಾರ ಧರಣಿ ನಿರತರನ್ನು ಭೇಟಿ ಮಾಡಿದ ವಿಜಯಪುರ ಪಿಡಬ್ಲುೃಡಿ ಇಲಾಖೆ ಇಇ ರಾಜು ಮುಜುಮ್‌ದಾರ್ ನಡೆಸಿದ ಸಂಧಾನ ಫಲಕೊಟ್ಟಿಲ್ಲ. ಎರಡು ದಿನಗಳಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು, ಧರಣಿ ಕೈಬಿಡುವಂತೆ ಮಾಡಿದ ಮನವಿಗೆ ಹೋರಾಟಗಾರರು ಸಹಮತ ವ್ಯಕ್ತಪಡಿಸಲಿಲ್ಲ.

ಮುಖಂಡ ಮಹ್ಮದ್ ನಾಗರಾಳ ಮಾತನಾಡಿ, ಮಹೆಬೂಬ ನಗರದ ಜನರ ಕುರಿತು ಅಧಿಕಾರಿಗಳಿಗೆ ಅನಾದರ ಭಾವನೆ ಇದೆ. ಅಭಿವೃದ್ಧಿ ವಿಷಯ ಬಂದಾಗ ಮಹೆಬೂಬ ನಗರ ಅಧಿಕಾರಿಗಳ ದೃಷ್ಟಿಯಲ್ಲಿ ತಾರತಮ್ಯಕ್ಕೆ ಒಳಗಾಗುತ್ತಿದೆ. ಈ ನಿರ್ಲಕ್ಷೃ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಎರಡ್ಮೂರು ದಿನಗಳಲ್ಲಿ ಕೆಲಸ ಮಾಡಿಸುತ್ತೇವೆ ಎಂದು ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಹೋರಾಟಗಾರರು ಮಾತ್ರ ತಮ್ಮ ಪಟ್ಟು ಸಡಿಸಲಿಲ್ಲ.

ಅಧಿಕಾರಿಗಳು ಸ್ಪಷ್ಟ ಭರವಸೆ ಕೊಡದ ಹಿನ್ನೆಲೆಯಲ್ಲಿ ಬುಧವಾರ ಬಾಯಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಾಗುತ್ತದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಮಹೆಬೂಬ ನಗರದ ಮುಖಂಡ ಗುಲಾಮೊಹ್ಮದ ದಫೇದಾರ ತಿಳಿಸಿದ್ದಾರೆ.

ಧರಣಿ ನಿರತರ ಆರೋಗ್ಯವನ್ನು ಟೆಂಟ್‌ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವಿಠ್ಠಲ ಕಿಲಾರಹಟ್ಟಿ, ಬಸವರಾಜ ಬಡಿಗೇರ, ರಮೇಶ ಢವಳಗಿ, ರುದ್ರೇಶ ಚರಂತಿಮಠ ತಪಾಸಣೆ ನಡೆಸಿದರು.

ಪಿಎಸ್‌ಐ ಆರೀಫ್ ಮುಶಾಪುರಿ, ಪಿಡಬ್ಲುೃಡಿ ಎಇ ರಾಜು ಚವ್ಹಾಣ, ನಿವಾಸಿಗಳಾದ ಅಲ್ಲಾಭಕ್ಷ ಟಕ್ಕಳಕಿ, ರಫೀಕ ಗೊಳಸಂಗಿ, ಇಸ್ಮಾಯಿಲ್ ಗೋಲಂದಾಜ, ಶಬ್ಬೀರ ಪಡ್ನೂರ, ದಾವಲ್ ಗೊಳಸಂಗಿ, ಅಮೀರಹಮ್ಜಾ ಮುಲ್ಲಾ, ಅಬ್ದುಲ್ ಹಮೀದ ಮೋಮಿನ, ಎಂ.ಎಲ್.ನಾಯ್ಕೋಡಿ, ಮಹ್ಮದಲಿ ಮುಲ್ಲಾ, ಇಮ್ರಾನ್ ಮುಲ್ಲಾ, ಮಹ್ಮದ ಅಲಿ ನಾಲತವಾಡ, ಎಂ.ಎಂ.ಹಿರೇಮನಿ, ಅಯೂಬ್ ಪಟ್ಟೇವಾಲೆ, ಜಾವೀದ ಢವಳಗಿ ಇತರರಿದ್ದರು.

ಹೋರಾಟಕ್ಕೆ ಬೆಂಬಲ

ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಮಾಜಿ ಸದಸ್ಯ ಮುತ್ತು ರಾಯಗೊಂಡ, ದಲಿತಪರ ಸಂಘಟನೆ ಮುಖಂಡ ಪರಶುರಾಮ ಮುರಾಳ, ಪ್ರಕಾಶ ಚಲವಾದಿ, ಆನಂದ ಮುದೂರ, ರೇವಣಸಿದ್ದಪ್ಪ ನಾಯಕ, ಸಂಗು ಚಲವಾದಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.