ಬೆಂಗಳೂರು: ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ರದ್ದು ಮಾಡುವ ಮೂಲಕ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದಕ್ಕೆ ಬಹುತೇಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದಾರೆ. ಇದರಿಂದಾಗಿ ಪ್ರಕ್ರಿಯೆ ಇನ್ನಷ್ಟು ತಡವಾಗಲಿದೆ.
ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿಗೆ ಮಾಹಿತಿ ನೀಡುವ ಸಂಬಂಧ ಬುಧವಾರ ಸಂಜೆಯೊಳಗೆ ವಿವರ ಒದಗಿಸುವಂತೆ ಸೂಚಿಸಲಾಗಿತ್ತು. ಆದರೆ ಗಡುವು ಮುಗಿದು 24 ಗಂಟೆಗಳು ಕಳೆದಿದ್ದರೂ 50ಕ್ಕೂ ಹೆಚ್ಚು ಇಲಾಖೆಗಳು ಮಾಹಿತಿ ನೀಡಿಲ್ಲ. ಅಲ್ಪಸಂಖ್ಯಾತ, ಸಾರ್ವಜನಿಕ ಶಿಕ್ಷಣ, ಸಹಕಾರ, ಮೂಲಸೌಕರ್ಯ, ಜನಸ್ಪಂದನ ಕೋಶ ಸೇರಿ 8 ಇಲಾಖೆಗಳು ಸರ್ಕಾರ ಕೇಳಿದ್ದ ಮಾಹಿತಿ ನೀಡಿವೆ.
ಅಧ್ಯಯನ: ಎಲ್ಲ ಇಲಾಖೆಯಿಂದ ಮಾಹಿತಿ ಪಡೆದು ಅದನ್ನು ಕ್ರೋಡೀಕರಿಸಿ ಅಧ್ಯಯನ ನಡೆಸಿ ಸಚಿವ ಸಂಪುಟ ಉಪ ಸಮಿತಿಗೆ ನೀಡುವ ಜವಾಬ್ದಾರಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯಾಧ್ಯಯನ ವಿಭಾಗದ ಹೊಣೆಯಾಗಿದೆ. ಉಪ ಸಮಿತಿಗೆ ವರದಿ ಸಲ್ಲಿಸಲು ತಡವಾಗಬಾರದು ಎಂದು ಆ ವಿಭಾಗದ ಅಧಿಕಾರಿಗಳು ಎಲ್ಲ ಇಲಾಖೆಗಳ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ತರುತ್ತಿದ್ದಾರೆ.
ಮಾಹಿತಿ ಕೋರಲು ಕಾರಣವೇನು?
ಯಾವ ಇಲಾಖೆಯಲ್ಲಿ ಎಷ್ಟು ಮಂಜೂರಾತಿ ಹುದ್ದೆಗಳಿವೆ, ಎಷ್ಟು ನೌಕರರಿದ್ದಾರೆ, ಯಾವ ಹುದ್ದೆಗಳನ್ನು ವಿಲೀನ ಮಾಡಬಹುದು, ಯಾವ ಇಲಾಖೆಗಳನ್ನು ಪರಸ್ಪರ ವಿಲೀನ ಮಾಡಬಹುದು ಎಂಬ ಮಾಹಿತಿ ಸರ್ಕಾರ ಕೇಳಿದೆ. ಹಾರನಹಳ್ಳಿ ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗ, ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ವೇತನ ಆಯೋಗಗಳು ಸಲ್ಲಿಸಿರುವ ವರದಿ ಗಮನದಲ್ಲಿಟ್ಟುಕೊಂಡು ವರದಿ ನೀಡುವಂತೆ ಸರ್ಕಾರ ಎಲ್ಲ ಇಲಾಖೆಗಳಿಗೂ ಹೇಳಿವೆ. ಪ್ರಾದೇಶಿಕ ಆಯುಕ್ತರ ಕಚೇರಿ ಸೇರಿ ಕೆಲ ಇಲಾಖೆಗಳನ್ನು ರದ್ದು ಮಾಡುವುದು, ಕೆಲವು ಇಲಾಖೆಗಳಲ್ಲಿನ ಅನಗತ್ಯ ಹುದ್ದೆಗಳನ್ನು ತೆಗೆದು ಹಾಕುವುದು, ವೇತನದ ಹೊರೆ ತಗ್ಗಿಸಿಕೊಳ್ಳುವುದು ಸರ್ಕಾರದ ಉದ್ದೇಶ.