ಶರಣೆ ಗಂಗಾಂಬಿಕೆ ಐಕ್ಯ ಮಂಟಪದ ಎದುರಿರುವ ಸಿಮೆಂಟ್ ಪ್ಲೇವರ್, ಪಕ್ಕದ ಉದ್ಯಾನದ ಡಿಸೈನ್ ಕಂಬದ ಕಾಂಪೌಂಡ್ ಕುಸಿದಿರುವುದು. 
ಜಿಲ್ಲೆ

ನಿರ್ಲಕ್ಷೃಕ್ಕೊಳಗಾದ ಐಕ್ಯಮಂಟಪ

| ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ

ಇಲ್ಲಿನ ಮಲಪ್ರಭಾ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರರ ಧರ್ಮಪತ್ನಿ ಶರಣೆ ಗಂಗಾಂಬಿಕೆ ಐಕ್ಯ ಮಂಟಪಕ್ಕೆ ನೆರೆ ಅಪ್ಪಳಿಸಿ ಅರ್ಧ ವರ್ಷ ಕಳೆದರೂ ಸುಧಾರಣೆ ಕಾರ್ಯ ಇನ್ನೂ ನಡೆದಿಲ್ಲ. ಮಂಟಪದ ಸುತ್ತಮುತ್ತಲಿನ ಪರಿಸರದಲ್ಲಿ ಉಂಟಾದ ಹಾನಿ ಸರಿಪಡಿಸಲು ಇನ್ನೂ ಕ್ರಮ ಕೈಗೊಳ್ಳದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

ಪ್ರತಿವರ್ಷದಂತೆ ಇಲ್ಲಿ ಜ.14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರೆ ನಡೆಯುತ್ತದೆ. ಆದರೆ, ಈವರೆಗೂ ಶರಣೆಯ ಐಕ್ಯ ಮಂಟಪದ ಬಳಿ ಹಾನಿಗೊಂಡ ಪ್ರದೇಶದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ಅಪಾಯದ ಮಟ್ಟದಲ್ಲಿ ತುಂಬಿ ಹರಿದ ಮಲಪ್ರಭಾ ನದಿ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ-4ರಿಂದ ಶ್ರೀಕ್ಷೇತ್ರಕ್ಕೆ ತೆರಳುವ ರಸ್ತೆ ಕಿತ್ತುಹೋಗಿ ಸಂಪೂರ್ಣ ಹಾಳಾಗಿದೆ. ಆಳೆತ್ತರದ ಗುಂಡಿಗಳು ಬಾಯ್ತೆರೆದು ಸಂಚಾರಕ್ಕೆ ಸಂಚಕಾರ ತಂದಿಟ್ಟಿದೆ.

ಐಕ್ಯಮಂಟಪ ಮುಂಭಾಗದ ಸಿಮೆಂಟ್ ಪ್ಲೇವರ್ಸ್‌ಗಳು ನದಿ ಕೊರೆತದಿಂದ ಕುಸಿದಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿವೆ. ಐಕ್ಯ ಮಂಟಪದ ಬಳಿ ಜನ ತೆರಳಲು ಭಯ ಪಡಬೇಕಾದ ಸ್ಥಿತಿ ತಂದೊಡ್ಡಿದೆ. ಐಕ್ಯಮಂಟಪದ ಪಕ್ಕದ ಉದ್ಯಾನವಂತೂ ಸಂಪೂರ್ಣ ಹಾಳಾಗಿದ್ದು, ಸುತ್ತಲೂ ಅಳವಡಿಸಿದ್ದ ಡಿಸೈನ್ ಕಂಬದ ಕಾಂಪೌಂಡ್ ನೆಲಕಚ್ಚಿ ಶ್ರೀಕ್ಷೇತ್ರದ ಅಂದಗೆಡಿಸಿದೆ. ಹೂದೋಟವು ಹಾಳಾಗಿದೆ.

ವಿಳಂಬ ಸರಿಯೇ?: ಸ್ಥಳೀಯವಾಗಿ ಶ್ರೀ ಗಂಗಾಂಬಿಕಾ ಮುಕ್ತಿಕ್ಷೇತ್ರ ಟ್ರಸ್ಟ್ ಇದೆ. ಆದರೆ, ಕೂಡಲ ಸಂಗಮ ಪ್ರಾಧಿಕಾರ ಶ್ರೀಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಪ್ರತಿವರ್ಷ ಮಕರ ಸಂಕ್ರಮಣದಲ್ಲಿ ಈ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಜನ ಸೇರುತ್ತಾರೆ. ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ ಎಂಬುದು ಗೊತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮತ್ತು ಕೂಡಲಸಂಗಮ ಪ್ರಾಧಿಕಾರ, ಹಾನಿಗೊಂಡ ಕ್ಷೇತ್ರದ ರಸ್ತೆ, ಐಕ್ಯಮಂಟಪದ ಪ್ರದೇಶ ದುರಸ್ತಿಗೊಳಿಸಿಲ್ಲ. ಈ ವಿಳಂಬ ಧೋರಣೆ ಏಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಐಕ್ಯ ಮಂಟಪದ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ: ಹಿಂದೆ ಈ ಬಗ್ಗೆ ಕೂಡಲ ಸಂಗಮ ಪ್ರಾಧಿಕಾರದ ಕಮಿಷನರ್ ಅವರನ್ನು ಪ್ರಶ್ನಿಸಿದಾಗ ಸರ್ಕಾರಕ್ಕೆ ನಷ್ಟದ ಮಾಹಿತಿ ನೀಡಲಾಗಿದೆ. ಆದಷ್ಟು ಬೇಗ ಹಾನಿಗೊಂಡ ಪ್ರದೇಶದ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಐದು ತಿಂಗಳು ಕಳೆದರೂ ಕಾರ್ಯರೂಪಕ್ಕೆ ಬರದೆ ಇರುವುದು ಎಂ.ಕೆ.ಹುಬ್ಬಳ್ಳಿ ಪಟ್ಟಣದ ನಾಗರಿಕರ ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಜಾತ್ರೆಗೆ ಇನ್ನೊಂದು ವಾರವಷ್ಟೇ ಸಮಯಾವಕಾಶ ಇದ್ದು, ಅಷ್ಟರಲ್ಲಿಯೇ ಹಾಳಾಗಿರುವ ರಸ್ತೆ ಸರಿಪಡಿಸಿ, ಹಾನಿಗೊಂಡ ಐಕ್ಯಮಂಟಪ ಪ್ರದೇಶ ಸರಿಪಡಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಜಾತ್ರೆಗೆ ಪರ್ಯಾಯ ಜಾಗ: ಪ್ರತಿವರ್ಷ ನದಿ ತುಂಬಿಕೊಂಡಿದ್ದರೂ ಐಕ್ಯಮಂಟಪದ ಸುತ್ತಲಿನ ಪ್ರದೇಶದಲ್ಲಿ ನೀರು ಇರುತ್ತಿರಲಿಲ್ಲ. ಅದೇ ಪ್ರದೇಶದಲ್ಲಿ ಜಾತ್ರೆ ನಡೆಯುತ್ತಿತ್ತು. ಆದರೆ, ಮಳೆಯಿಂದ ಐಕ್ಯಮಂಟಪದ ಸುತ್ತಲಿನ ಪ್ರದೇಶ ಹಾಗೂ ಜಮೀನುಗಳಲ್ಲಿ ಈಗಲೂ ಮಲಪ್ರಭೆಯ ನೀರು ಆವರಿಸಿಕೊಂಡಿದೆ. ಐಕ್ಯಮಂಟಪದ ಪಕ್ಕದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸಮೀಪದ ಬೇರೊಂದು ಜಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಜಾಗ ಗುರುತಿಸಲು ಸ್ಥಳೀಯ ಪಂಚಾಯಿತಿ ಆಡಳಿತ ಮತ್ತು ಟ್ರಸ್ಟ್ ಮುಂದಾಗಿದ್ದು, ನದಿ ತಟದಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕಿದೆ. ಬಾರಿ ಪ್ರಮಾಣದಲ್ಲಿ ನದಿಯಲ್ಲಿ ನೀರು ಇರುವುದರಿಂದ ಪುಣ್ಯ ಸ್ನಾನಕ್ಕೆ ಬರುವ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜಾತ್ರೆಯಲ್ಲಿ ಜನರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸ್ಥಳೀಯ ಆಡಳಿತ ಮತ್ತು ತಾಲೂಕಾಡಳಿತ ಈಗಿನಿಂದಲೇ ಯೋಜನೆ ಮಾಡಿಕೊಳ್ಳಬೇಕಿದೆ.

ನೆರೆಯಿಂದ ಹಾನಿಯಾದ ಪ್ರದೇಶ ಅಭಿವೃದ್ಧಿಗೊಳಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಕೂಡಲಸಂಗಮ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಟ್ರಸ್ಟ್ ವತಿಯಿಂದ ವಿನಂತಿಸಿದ್ದೇವೆ. ಜಾತ್ರೆಯ ಒಳಗೆ ರಸ್ತೆ ಮತ್ತು ಅಗತ್ಯ ದುರಸ್ತಿ ಕಾರ್ಯ ಕೈಗೊಂಡರೆ ಭಕ್ತರಿಗೆ ಅನುಕೂಲವಾಗುತ್ತದೆ.| ಚಿನ್ನಪ್ಪ ಮುತ್ನಾಳ ಶರಣೆ ಗಂಗಾಂಬಿಕಾ ಮುಕ್ತಿಕ್ಷೇತ್ರ ಟ್ರಸ್ಟ್ ನಿರ್ದೇಶಕ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದಂತೆ ಮುಳುಗಡೆ ಪ್ರದೇಶದಲ್ಲಿ ಉಂಟಾದ ಹಾನಿಗೆ ಪರಿಹಾರ ನೀಡಲು ಅವಕಾಶ ಇಲ್ಲ. ಪಿಡಬ್ಲುೃಡಿ ಲ್ಯಾಂಡ್ ಕೂಡ ಅಲ್ಲಿದೆ. ಶಾಸಕರ ಅನುದಾನದಲ್ಲಿ ಆ ಸ್ಥಳದ ಅಭಿವೃದ್ಧಿ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನೆರೆಯಿಂದ ಹಾನಿಗೊಂಡ ಪ್ರದೇಶದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ಕಳಿಸಿದ್ದೇವೆ.| ಪ್ರವೀಣ ಜೈನ್ ತಹಸೀಲ್ದಾರ್ ಕಿತ್ತೂರ ನೆರೆ ಅಪ್ಪಳಿಸಿ ಅರ್ಧ ವರ್ಷ ಕಳೆದರೂ ಹಾಳಾದ ರಸ್ತೆ, ಐಕ್ಯ ಮಂಟಪದ ಪ್ರದೇಶವನ್ನು ಅಧಿಕಾರಿಗಳು ಸರಿಪಡಿಸಿಲ್ಲ. ಇದರಿಂದ ಪ್ರವಾಸಿಗರಿಗೆ ಸುರಕ್ಷತೆ ಇಲ್ಲದಂತಾಗಿದ್ದು, ತಕ್ಷಣ ಸರಿಪಡಿಸಬೇಕು. | ರಾಜೇಂದ್ರ ಮುತ್ನಾಳ(ಇಟಗಿ) ಸ್ಥಳೀಯ ನಿವಾಸಿ ನೆರೆಯಿಂದ ಹಾನಿಗೊಂಡ ಗಂಗಾಂಬಿಕೆ ಐಕ್ಯಮಂಟಪದ ದುರಸ್ತಿಗಾಗಿ ಈಗಾಗಲೇ ಪ್ರಾಧಿಕಾರದ ತಜ್ಞರ ಸಮಿತಿಯೊಂದಿಗೆ ಚರ್ಚಿಸಿದ್ದೇನೆ. ಸುಮಾರು 14 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ತಕ್ಷಣ ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಹಾನಿಗೊಂಡ ಪ್ರದೇಶದ ಬಳಿ ಬ್ಯಾರಿಕೇಟ್ ಅಳವಡಿಸಲು ಸೂಚಿಸಿ, ಜಾತ್ರೆಯಲ್ಲಿ ಸೇರುವ ಜನತೆಗೆ ಅನುಕೂಲತೆಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸುತ್ತೇವೆ. ಶೀಘ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ.| ರಾಜೇಶ್ವರಿ ಅಗಸರ ಕಮಿಷನರ್, ಕೂಡಲಸಂಗಮ ಪ್ರಾಧಿಕಾರ