ಗುತ್ತಲ: ಹಾವೇರಿ-ಬಳ್ಳಾರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಮೀಪದ ತುಂಗಭದ್ರಾ ನದಿ ಸೇತುವೆ ಶಿಥಿಲಾವಸ್ಥೆ ತಲುಪಿದೆ.
ಸುಮಾರು 500 ಮೀ. ಉದ್ದದ ಈ ಸೇತುವೆ 51 ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದೆ. 1960ರಲ್ಲಿ ಅಡಿಗಲ್ಲು ಹಾಕಲಾಯಿತು. 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಉದ್ಘಾಟನೆ ನೆರವೇರಿಸಿದ್ದರು. ಪ್ರಸ್ತುತ ಸೇತುವೆಯ ಸಿಮೆಂಟ್ ಕಾಂಕ್ರೀಟ್ ಕಳಚುತ್ತ ಸಾಗಿದೆ. ಅಸಮರ್ಪಕ ನಿರ್ವಹಣೆಯಿಂದಾಗಿ ಸೇತುವೆ ಮೇಲ್ಭಾಗವೂ ಹಾಳಾಗಿದೆ. ಸೇತುವೆಯ ಅಕ್ಕಪಕ್ಕದ ರಕ್ಷಣಾ ಗೋಡೆಯಲ್ಲಿ ಕಬ್ಬಿಣದ ಸರಳುಗಳು ಹೊರ ಚಾಚಿಕೊಂಡಿವೆ.
2008ರಲ್ಲಿ ಜಿಲ್ಲೆಯ ಗಡಿ ಮರು ವಿಂಗಡಣೆಯ ನಂತರ ಸೇತುವೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿತು. ಕಳೆದ ಕೆಲ ತಿಂಗಳ ಹಿಂದೆ ಮತ್ತೇ ಸರ್ವೇ ಮಾಡಲಾಗಿದ್ದು, ಸೇತುವೆಯ ಶೇ.80ರಷ್ಟು ಭಾಗ ಹಾವೇರಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ ಎನ್ನಲಾಗಿದೆ. 2008ಕ್ಕಿಂತ ಮೊದಲು ಈ ಸೇತುವೆ ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿಯೇ ಇತ್ತು. ಗಡಿ ಮರು ವಿಂಗಡಣೆ ಬಗ್ಗೆ ಅನೇಕ ಅನುಮಾನಗಳಿದ್ದು ಈ ಬಗ್ಗೆ ಹಾವೇರಿ ಜಿಲ್ಲಾಡಳಿತ ಗಮನ ಹರಿಸಬೇಕಿದೆ ಎನ್ನುತ್ತಾರೆ ಅನೇಕರು.
ಸೇತುವೆ ನಿರ್ವಹಣೆ ಸರಿಯಾಗಿಲ್ಲ. ಅಲ್ಲದೆ, ಪ್ರತಿ ವರ್ಷ ಬೇಸಿಗೆಯಲ್ಲಿ ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ದೃಷ್ಟಿಯಿಂದ ನಗರಸಭೆಯವರು ಸೇತುವೆ ಕೆಳಗೆ ಉಸುಕಿನ ತಡೆಗೋಡೆ ನಿರ್ಮಿಸುತ್ತಾರೆ. ತಡೆಗೋಡೆ ನಿರ್ಮಿಸುವ ಗುತ್ತಿಗೆದಾರರು ಸ್ಥಳದಲ್ಲಿನ ಉಸುಕನ್ನೇ ಸಾವಿರಾರು ಚೀಲಗಳಿಗೆ ತುಂಬುತ್ತಾರೆ. ಇದೂ ಸೇತುವೆ ಶಿಥಿಲಗೊಳ್ಳಲು ಒಂದು ಕಾರಣ ಎಂದು ಕೆಲವರು ದೂರುತ್ತಾರೆ.
ಮಳೆಗಾಲದಲ್ಲಿ ಸೇತುವೆ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲವಾಗಿದೆ. ಸೇತುವೆಯ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಅಧಿಕ ಭಾರದ ವಾಹನಗಳ ಸಂಚಾರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅರ್ಧ ಶತಮಾನ ಕಂಡಿರುವ ಸೇತುವೆ ದಿನೇ ದಿನೆ ಶಿಥಿಲಗೊಳ್ಳುತ್ತಿದೆ.
ಭಾವನಾತ್ಮಕವಾಗಿ ಈ ಸೇತುವೆ ನಮ್ಮ ಹಾಗೂ ವಿಜಯನಗರ ಜಿಲ್ಲೆಯ ಸಂಪರ್ಕ ಕೊಂಡಿಯಾಗಿದೆ. ಮೈಲಾರಲಿಂಗೇಶ್ವರ, ಕುರವತ್ತಿಯ ಮಲ್ಲಿಕಾರ್ಜುನ-ಬಸವೇಶ್ವರ ಸ್ವಾಮಿಯ ದೇವರ ದರ್ಶನಕ್ಕೆ ಹಾಗೂ ತಾಲೂಕಿನ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಮಂತ್ರಿಗಳ ಗಮನಕ್ಕೆ ತಂದು ದುರಸ್ತಿಗೆ ಕ್ರಮ ವಹಿಸಲಾಗುವುದು.-ರುದ್ರಪ್ಪ ಲಮಾಣಿ, ಶಾಸಕ, ಹಾವೇರಿ ಸೇತುವೆ ಶಿಥಿಲಗೊಂಡಿದ್ದು, ದುರಸ್ತಿಗೆ ಅನುದಾನದ ಕೊರತೆ ಇದೆ. ತಾತ್ಕಾಲಿಕ ದುರಸ್ತಿ ಅಥವಾ ನಿರ್ವಹಣೆಗೆ ಪ್ರಸ್ತಾವನೆ ಕಳುಹಿಸುತ್ತೇವೆ. ಸೇತುವೆ ಶಿಥಿಲಗೊಂಡಿದ್ದರಿಂದ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಲು ಸಹ ಹೆದ್ದಾರಿ ಪ್ರಾಧಿಕಾರದಿಂದ ಸರ್ವೇ ಆಗಿದೆ.-ಮಹೇಶಪ್ಪ ಎನ್., ಎಇಇ, ಪಿಡಬ್ಲುೃಡಿ ಹೂವಿನಹಡಗಲಿ