ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ ನಾಯಕರು
ಜಿಲ್ಲಾ ಸಂಕೀರ್ಣದಲ್ಲಿ ಪ್ರತಿಭಟನೆ ಅವಕಾಶ ನೀಡದ ಆದೇಶಕ್ಕೆ ವಿರೋಧ
ರಾಮನಗರ
ಜಿಲ್ಲಾ ಸಂಕೀರ್ಣದಲ್ಲಿ ಪ್ರತಿಭಟನೆ ಮಾಡದಂತೆ ನಿಷೇಧಾಜ್ಞೆ ಹೇರಿರುವ ಜಿಲ್ಲಾಧಿಕಾರಿ ಆದೇಶ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರೈತ ಸಂಘ ಸೇರಿ ಇತರ ಸಂಟನೆಗಳ ಪದಾಧಿಕಾರಿಗಳು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಮನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಬಗ್ಗೆ ವಿವರಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರ ನ್ಯಾಯಯುತ ಬೇಡಿಕೆ ಬಗ್ಗೆ ಸಭೆ ನಡೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಯ ಕರ್ನಾಟಕ ಜನಪರ ವೇದಿಕೆ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ರೈತ ಚಳವಳಿ ಹತ್ತಿಕ್ಕುವ ಮನಸ್ಥಿತಿ ಸಂವಿಧಾನಕ್ಕೆ ಮಾರಕ. ತಕ್ಷಣ ಜಿಲ್ಲಾಧಿಕಾರಿ ಅವರು ಆದೇಶ ವಾಪಸ್ ಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಹಾಗೂ ರೈತ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ರೈತರ 32 ಬೇಡಿಕೆಗಳ ಸಾಧಕ&ಬಾಧಕಗಳ ಬಗ್ಗೆ ವರದಿ ಪಡೆದು ಪರಿಹಾರ ಒದಗಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಹೊರಡಿಸಿರುವ 144 ಸೆಕ್ಷನ್ ನಿಷೇಧಾಜ್ಞೆಯ ಬಗ್ಗೆ ಡಿಸಿ ಜತೆ ಚರ್ಚಿಸಿ ವಾಪಸ್ ಪಡೆಯುವಂತೆ ಸೂಕ್ತ ನಿರ್ದೇಶನ ನೀಡುತ್ತೇನೆ. 15 ದಿನಗಳ ಒಳಗಾಗಿ ಎಲ್ಲ ಸಮಸ್ಯೆಗಳ ಬಗ್ಗೆ ಕಾನೂನು ತಜ್ಞರೊಡನೆ ಚರ್ಚಿಸಿ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲರು ಮಾತನಾಡಿ, ಹೋರಾಟ ವೇಳೆ ರೈತ ಮಹಿಳೆಯಲು ಶೌಚಗೃಹಕ್ಕೆ ಬೇಡಿಕೆ ಸಲ್ಲಿಸಿದಾಗ ರಸ್ತೆಯಲ್ಲೇ ಮಾಡಿ ಎಂದು ಉದ್ಧಟತನದಿಂದ ಅವಹೇಳನಕಾರಿಯಾಗಿ ವರ್ತಿಸಿ ಅವಮಾನ ಮಾಡಿದ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಮಲ್ಲಯ್ಯ, ಸಂಚಾಲಕರಾದ ಚೀಲೂರು ಮುನಿರಾಜು, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕರವೇ ಪ್ರವಿಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ರಾಜು ಎಂಎನ್ಆರ್, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಶಿವುಗೌಡ, ಕೆಆರ್ಎಸ್ ಮುಖಂಡ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಕರವೇ ಕಾರ್ಯಧ್ಯಕ್ಷ ಲೋಕೇಶ್ ಆರ್ ಬಿ ಎಲ್, ರೈತಸಂಘದ ಚಂದ್ರು ಉಪಸ್ಥಿತರಿದ್ದರು.