ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ನಿರ್ಲಕ್ಷ್ಯ ಸಲ್ಲ

Karthika K.S

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ದೇವಸ್ಥಾನ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಮಸ್ಯೆ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಗುರುರಾಜ ಗಂಟಿಹೊಳೆ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿದರು.

ಕೊಲ್ಲೂರು ದೇವಳ ಹಾಗೂ ಅದರ ಸುತ್ತಮುತ್ತಲಿನಲ್ಲಿ ಅರಣ್ಯ ಹಾಗೂ ಕಂದಾಯ ಸಮಸ್ಯೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳೂ ಒಳಗೊಂಡಂತೆ ಕೊಲ್ಲೂರಿನ ಸಮಗ್ರ ಅಭಿವೃದ್ಧಿ ನಿರ್ಲಕ್ಷಿಸುವ ಹಾಗೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದ ಇಲಾಖಾ ಅಧಿಕಾರಿಗಳ ನಡೆ ಸಹಿಸಲು ಸಾಧ್ಯವಿಲ್ಲ. ಇದರಿಂದ ಕೊಲ್ಲೂರಿನ ಸಮಸ್ಯೆ ಉಲ್ಬಣವಾಗುವುದರ ಜತೆಗೆ ಶ್ರೀಕ್ಷೇತ್ರಕ್ಕೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಎಲ್ಲ ಇಲಾಖೆ ಪರಸ್ಪರ ಸಮನ್ವಯ ಸಾಧಿಸಿ ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಗೋಶಾಲೆ ಅಭಿವೃದ್ಧಿ ಕಾಮಗಾರಿ ಸಹಿತವಾಗಿ ಕೊಲ್ಲೂರಿನ ಅಭಿವೃದ್ಧಿಗೆ ವೇಗ ನೀಡಬೇಕು ಎಂದರು.

ಶೀಘ್ರ ಕಾಮಗಾರಿಗೆ ಸೂಚನೆ: ಕೊಲ್ಲೂರು ಮಾರ್ಗವಾಗಿ ಹಾದು ಹೋಗುವ ರಾ.ಹೆ. ಕಾಮಗಾರಿಗಳ ಬಗ್ಗೆ ರಾ.ಹೆ. ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಗಂಟಿಹೊಳೆ, ಹೆದ್ದಾರಿ ವಿಸ್ತರಣೆ ಕಾಮಗಾರಿ ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ಕೊಲ್ಲೂರು ದೇವಸ್ಥಾದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಮೂಕಾಂಬಿಕಾ ವನ್ಯಜೀವಿ ವಲಯ ಅರಣ್ಯ ಅಧಿಕಾರಿ, ಬೈಂದೂರು ಹಾಗೂ ಕುಂದಾಪುರ ಸಹಾಯಕ ವಲಯ ಅರಣ್ಯ ಅಧಿಕಾರಿಗಳು, ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳು, ನಿರ್ಮಿತಿ ಕೇಂದ್ರದ ಇಂಜಿನಿಯರ್, ಕೆಆರ್‌ಐಡಿಎಲ್ ಇಂಜಿನಿಯರ್, ಉಪ ತಹಸೀಲ್ದಾರರು, ಕೊಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಒಳಚರಂಡಿ ವ್ಯವಸ್ಥೆಗೆ ಕ್ರಮ

ಕೊಲ್ಲೂರು ದೇವಳದ ಸುತ್ತ ಇರುವ ಒಳಚರಂಡಿಗೆ ಬಗ್ಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸುದ್ದಿ ಬಿತ್ತರವಾಗುತ್ತಿದೆ. ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು. ಒಳಚರಂಡಿ ವ್ಯವಸ್ಥೆ ಕೊಲ್ಲೂರು ದೇವಳದ ಮೂಲಕ ಅನುಷ್ಠಾನವಾಗುತ್ತಿರುವ ಕಾರಣ ಅಲ್ಲಿನ ಅಧಿಕಾರಿಗಳು ಹಾಗೂ ಒಳಚರಂಡಿಗೆ ಮಂಡಳಿ ಇದಕ್ಕೆ ಉತ್ತರದಾಯಿಗಳಾಗಬೇಕು. ಒಳಚರಂಡಿ ವ್ಯವಸ್ಥೆಯಲ್ಲಿ ನ್ಯೂನ್ಯತೆ ಇದ್ದಲ್ಲಿ ಸರಿ ಪಡಿಸಲು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.