ಬ್ರಹ್ಮಾವರ: ಬಿದ್ಕಲ್‌ಕಟ್ಟೆಯ ರಸ್ತೆಯಲ್ಲಿ ಅಪಾಯಕಾರಿ ಮರಗಳ ಸಂಖ್ಯೆಗಳು ಹೆಚ್ಚುತ್ತಲೇ ಇದ್ದು, ಉನ್ನತ ಅಧಿಕಾರಿಗಳ ಸೂಚನೆಯಿದ್ದರೂ ಅವುಗಳ ಕಡಿಯದೇ ನಿರ್ಲಕ್ಷೃ ವಹಿಸಲಾಗುತ್ತಿದೆ.
ಬಾರಕೂರು ಮಂದಾರ್ತಿ ಸಂಚಾರ ರಸ್ತೆಯಲ್ಲಿ ಮಾಸ್ತಿ ಅಮ್ಮನವರ ದೇವಸ್ಥಾನ ಬಳಿ ಶುಕ್ರವಾರ ಬೆಳಗ್ಗೆ ಬೃಹತ್ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಾರಕೂರು ಶೌರ್ಯ ವಿಪತ್ತು ತಂಡದ ಸದಸ್ಯರು ಮತ್ತು ಗ್ರಾಮಸ್ಥರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.
ಇಬ್ಬರ ಬಲಿ ಪಡೆದಿದ್ದ ಮರ: ಹತ್ತು ವರ್ಷಗಳ ಹಿಂದೆ ಅಪಾಯಕಾರಿಯಾಗಿದ್ದ ಬೃಹತ್ ಮರವೊಂದು ಈ ಭಾಗದಲ್ಲಿ ಉರುಳಿದ್ದು, ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದಿತ್ತು. ಅಂದಿನ ಜಿಲ್ಲಾಧಿಕಾರಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದರೂ ಅವುಗಳನ್ನು ನಿರ್ಲಕ್ಷಿಸಲಾಗಿತ್ತು.