ಹರಪನಹಳ್ಳಿಯಲ್ಲಿ ಪುರಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷೆ ಫಾತೀಮಾ ಬೀ, ಉಪಾಧ್ಯಕ್ಷ ಎಚ್.ಕೊಟ್ರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಇತರರಿದ್ದರು. 
ಜಿಲ್ಲೆ

ಹರಪನಹಳ್ಳಿಯಲ್ಲಿ ಸ್ಮಶಾನಗಳ ಸ್ವಚ್ಛತೆಗೆ ನಿರ್ಲಕ್ಷೃ - ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ ಆಕ್ರೋಶ

ಹರಪನಹಳ್ಳಿ: ಪುರಸಭೆ ಸದಸ್ಯರು ಯಾವುದೇ ಪಕ್ಷದಿಂದ ಆಯ್ಕೆಯಾಗಿದ್ದರೂ ಪಟ್ಟಣದ ಅಭಿವೃದ್ಧಿಗೆ ನಾನು ಸಹಕರಿಸುವುದಾಗಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸ್ಮಶಾನಗಳ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕಿ ಹೇಳಿದ್ದಕ್ಕೆ, ಮಾಜಿ ಅಧ್ಯಕ್ಷ ಹರಾಳು ಅಶೋಕ ಮಾತನಾಡಿ, ಪಟ್ಟಣದಲ್ಲಿ 16 ಸ್ಮಶಾನಗಳಿದ್ದು, ಒಂದು ಕೂಡ ಸ್ವಚ್ಛವಾಗಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣವೆಂದು ತಿರುಗೇಟು ನೀಡಿದರು.

ಮಹಾಯೋಜನೆ ನಕ್ಷೆ ನಾಲ್ಕೈದು ವರ್ಷದ ಹಿಂದೆಯೇ ಮುಕ್ತಾಯವಾಗಿದ್ದು, ಹುಬ್ಬಳ್ಳಿ ಸಂಸ್ಥೆಯೊಂದಕ್ಕೆ 24 ಲಕ್ಷ ರೂ.ಗೆ ಟೆಂಡರ್ ಆಗಿತ್ತು. ಈ ಸಂಸ್ಥೆಯ 18ಕ್ಕೂ ಅಧಿಕ ಇಂಜಿನಿಯರ್‌ಗಳು ಪಟ್ಟಣದ ಸುತ್ತ ದ್ರೋಣ್ ಸರ್ವೇ ಪೂರ್ಣಗೊಳಿಸಿ ಮಾಹಿತಿ ನೀಡಿದೆ. ಆದರೆ, ನಗರ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶಕರು, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಪೂರ್ಣ ಗೊಳಿಸಲು ನಿರ್ಲಕ್ಷೃ ವಹಿಸಿದ್ದಾರೆ ಎಂದು ಹರಾಳು ಅಶೋಕ ದೂರಿದರು.

ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ನಾವು ನಿರ್ಲಕ್ಷೃ ವಹಿಸಿಲ್ಲ. ಮೇಲಧಿಕಾರಿಗಳ ಹಂತದಲ್ಲಿ ಕಡತಗಳು ಬಾಕಿ ಉಳಿದಿವೆ ಎಂದರು. ಅದಕ್ಕೆ ಹರಾಳು ಅಶೋಕ ಪ್ರತಿಕ್ರಿಯಿಸಿ ಮುಖ್ಯಾಧಿಕಾರಿ ಸುಳ್ಳು ಹೇಳುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಕಡತಗಳು ಒಂದೇ ಕಡೆ ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲ. ಈ ಕುರಿತ ನಿರ್ಲಕ್ಷೃ ಮುಂದುವರಿದರೆ ಪುರಸಭೆ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಈ ಕುರಿತ ಕೆಲಸ ಬೇಗ ಪೂರ್ಣಗೊಳಿಸಿ ಎಂದು ಮುಖ್ಯಾಧಿಕಾರಿಗೆ ಶಾಸಕಿ ಸೂಚಿಸಿದರು.

ಕೆಕೆಆರ್‌ಡಿಬಿ ಅನುದಾನ ಗ್ರಾಮೀಣ ಪ್ರದೇಶಕ್ಕಷ್ಟೇ ನೀಡದೆ, ಪಟ್ಟಣದ ಅಭಿವೃದ್ಧಿಗೂ ನೀಡಬೇಕು. ನಿಮಗೆ ಪಟ್ಟಣದ ಜನತೆಯೂ ಮತ ನೀಡಿದ್ದಾರೆ ಎಂದು ಸದಸ್ಯರು ತಿಳಿಸಿದರು. ಎಂ.ವಿ.ಅಂಜಿನಪ್ಪ, ಇಜಂತ್ಕರ್ ಮಂಜುನಾಥ, ಜಾಕೀರ್, ರೊಕ್ಕಪ್ಪ, ರೆಹಮಾನ್ ಸಾಬ್, ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್ ಇತರರಿದ್ದರು.