ಜಿಲ್ಲೆ

ಬ್ಯಾಕಲಾಗ್ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ವಿನಾಯಿತಿ ಕೋರಿದ 26 ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸ್ಲಮ್ ಬೋರ್ಡ್ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬುಧವಾರದಂದು ಅಧಿವೇಶನದಲ್ಲಿ ಈ ಕುರಿತು ಸದನದ ಗಮನ ಸೆಳೆದು ಮಾತನಾಡಿದ ಪ್ರಸಾದ ಅಬ್ಬಯ್ಯ, ಸಾಮಾನ್ಯ ಹುದ್ದೆಗಳು ಭರ್ತಿ ಮಾಡಿಕೊಳ್ಳಲು ಯಾವುದೇ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ ಎಂದು ತಿಳಿಸಿದರು.

ಕೆಲ ಇಲಾಖೆಗಳ ಅಧಿಕಾರಿಗಳಿಗೆ ಪರಿಶಿಷ್ಟರಿಗೆ ಮೀಸಲಿಟ್ಟ ಬ್ಯಾಕಲಾಗ್ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಮತ್ತು ಪದನಾಮ (ಕೇಡರ್) ಕೂಡ ಬದಲಾವಣೆ ಮಾಡುತ್ತಾರೆ. ಇದು ಕಾನೂನು ಬಾಹಿರವಾಗಿದ್ದು, ಅಂಥವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 21,376 ಬ್ಯಾಕಲಾಗ್ ಹುದ್ದೆಗಳಲ್ಲಿ 19,645 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 916 ಹುದ್ದೆಗಳ ಭರ್ತಿಬಾಕಿ ಇದೆ. ಇನ್ನು 26 ಇಲಾಖೆಗಳು 795 ಬ್ಯಾಕಲಾಗ್ ಹುದ್ದೆಗಳ ಭರ್ತಿಗೆ ವಿನಾಯಿತಿ ಕೇಳಿದ್ದು, ಸಂವಿಧಾನ ವಿರೋಧಿಯಾಗಿದೆ ಎಂದು ಪ್ರಸಾದ ಅಬ್ಬಯ್ಯ ಅವರು ಸದನದಲ್ಲಿ ಪ್ರತಿಪಾದಿಸಿದರು.

ಸಮಾಜ ಕಲ್ಯಾಣ ಇಲಾಖೆಯು ನೋಡಲ್ ಏಜನ್ಸಿಯಾಗಿದ್ದು, ಸದ್ಯ ಬ್ಯಾಕಲಾಗ್ ನೇರ ನೇಮಕಾತಿಗಳ ಹುದ್ದೆಗಳ ಮಾಹಿತಿ ಮಾತ್ರ ಕೇಳಿದ್ದೇನೆ. ಪ್ರಮೋಶನಲ್ ಬ್ಯಾಕಲಾಗ್ ಹುದ್ದೆಗಳು ಸಾವಿರಾರು ಸಂಖ್ಯೆಯಲ್ಲಿ ಬಾಕಿ ಇದ್ದು, ಭರ್ತಿಮಾಡಲಾಗಿಲ್ಲ. ಉದಾಹರಣೆಗೆ ನಮ್ಮ ಕೊಳಗೇರಿ ಮಂಡಳಿಯಲ್ಲೇ ನಿಯಮಾವಳಿ ಪಾಲನೆ ಮಾಡದೇ ಹುದ್ದೆಗಳ ಭರ್ತಿ ಮಾಡಲಾಗಿದೆ ಎಂದು ದೂರಿದರು.

ಇದು ಅಧಿಕಾರಿಗಳ ಪರಿಶಿಷ್ಟರ ಬಗ್ಗೆ ಇರುವ ಮನಸ್ಥಿತಿಯನ್ನು ತೋರಿಸುತ್ತದೆ. ಅಧಿಕಾರಿಗಳ ಪರಿಶಿಷ್ಟರ ವಿರೋಧಿ ಧೋರಣೆ ವ್ಯಕ್ತವಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಮೇಲುಸ್ತುವಾರಿ ಮಾಡಬೇಕಿದೆ. ಬ್ಯಾಕಲಾಗ್ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಬ್ಯಾಕಲಾಗ್ ಹುದ್ದೆಗಳ ಭರ್ತಿಗೆ ವಿನಾಯಿತಿ ಕೋರಿದ ಕುರಿತು ಜನವರಿಯಲ್ಲಿ ಕ್ಯಾಬಿನೆಟ್ ಉಪಸಮಿತಿಯಲ್ಲಿ ರ್ಚಚಿಸಲಾಗಿದೆ. ಆದರೆ, ವಿನಾಯಿತಿ ನೀಡಲು ಸರ್ಕಾರ ಒಪ್ಪಿಲ್ಲ. ಇನ್ನು ಬ್ಯಾಕಲಾಗ್ ಹುದ್ದೆಗಳ ಸಮೀಕ್ಷೆಗೆ 5 ತಂಡಗಳನ್ನು ರಚಿಸಿದ್ದು, ಮಾಹಿತಿ ಕಲೆ ಹಾಕಲಾಗುತ್ತದೆ. ಇನ್ನುಳಿದ ಹುದ್ದೆಗಳನ್ನು ಶೀಘ್ರ ಭರ್ತಿಮಾಡಲಾಗುವುದು ಎಂದು ಭರವಸೆ ನೀಡಿದರು.