ಜಿಲ್ಲೆ

ಮಿಶ್ರ ಬೆಳೆಯಲ್ಲಿ ನೆಮ್ಮದಿ ಕಂಡ ರೈತ

ನಾಗೇಶ ಎಸ್

ಸಿದ್ದಾಪುರ: ಕೃಷಿ ನಂಬಿ ನಡೆದರೆ ನೌಕರಿಗಿಂತಲೂ ಹೆಚ್ಚು ಆದಾಯ ಗಳಿಸಲು ಸಾಧ್ಯವಿದೆ ಎಂಬುದಕ್ಕೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಗದ್ದೆಮನೆ ಕುಞಂಣ್ಣ ಹಾಗೂ ಗದ್ದೆಮನೆ ವಾರಿಜ ದಂಪತಿ ಸಾಕ್ಷಿಯಾಗಿದ್ದಾರೆ.

ಇವರು ತಮ್ಮ ತೋಟದಲ್ಲಿ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮಾದರಿ ಕೃಷಿ ಬದುಕು ರೂಪಿಸಿಕೊಂಡಿದ್ದಾರೆ. ಗದ್ದೆಮನೆ ಕುಞಂಣ್ಣ ಕಾಲೇಜು ಕಲಿಕೆಯ ನಂತರ ಪಿತ್ರಾರ್ಜಿತವಾಗಿ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಆರಂಭಿಸಿದರು. ವಿವಾಹದ ನಂತರ ಪತ್ನಿ ವಾರಿಜ ಕೂಡ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಕುಞಂಣ್ಣ ಅವರು ಮಾಲ್ದಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೂಡ ಆಗಿದ್ದಾರೆ. 26 ವರ್ಷದಿಂದ ತಮ್ಮ ಜಮೀನಿನಲ್ಲಿ ಕೃಷಿ ಕಾಯಕ ಮಾಡಿಕೊಂಡು ಬಂದಿದ್ದಾರೆ. ತೋಟದಲ್ಲಿ ಅರೇಬಿಕಾ ಮತ್ತ ರೊಬಸ್ಟಾ ಕಾಫಿ ಬೆಳೆದಿದ್ದು, ಒಂದೂವರೆ ಎಕರೆಯಲ್ಲಿ ಸುಮಾರು 19 ರಿಂದ 22 ಚೀಲ ಕೊಯ್ಯುತ್ತಾರೆ. ತೋಟದಲ್ಲಿರುವ ಪಾನವಾಳ ಮರ, ಸಿಲ್ವರ್ ಹಾಗೂ ಅಡಕೆ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಕಾಫಿ ಹಾಗೂ ಇತರ ಬೆಳೆಗಳಿಗೆ ಹೋಲಿಸಿದರೆ ಕಾಳುಮೆಣಸಿನಿಂದ ಉತ್ತಮ ಆದಾಯ ದೊರೆಯುತ್ತಿದೆ. ಜಮೀನಿನಲ್ಲಿ ಅಡಕೆ, ತೆಂಗು, ಬಾಳೆ ಬೆಳೆಯಲಾಗಿದೆ. ಆದರೆ ರಾತ್ರಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಕೃಷಿ ಫಸಲು ರಕ್ಷಿಸುವುದೇ ತುಂಬಾ ಕಷ್ಟಕರವಾಗಿದೆ ಎಂದು ರೈತ ಗದ್ದೆ ಮನೆ ಕುಞಂಣ್ಣ ಹೇಳುತ್ತಾರೆ. ಜತೆಗೆ ಇವರು ಮನೆಯ ಸುತ್ತ ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.

ಹಸು ಸಾಕಣೆ: ಹಲವು ವರ್ಷಗಳಿಂದ ಗದ್ದೆ ಮನೆ ಕುಞಂಣ್ಣ ಹಾಗೂ ವಾರಿಜ ದಂಪತಿ ಮನೆ ಸಮೀಪದ ಜಮೀನಿನಲ್ಲಿ ಸುಸಜ್ಜಿತ ಕೊಟ್ಟಿಗೆ ನಿರ್ಮಾಣ ಮಾಡಿ, ಕ್ರಾಸ್‌ಬ್ರೀಡ್ ತಳಿಯ ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಪ್ರತಿದಿನ 8ರಿಂದ 10 ಲೀಟರ್ ಹಾಲು ಕರೆಯುತ್ತಿದ್ದು, ಲೀಟರ್‌ಗೆ 35 ರೂ.ನಂತೆ ಸಮೀಪದ ಹೋಟೆಲ್-ಮನೆಗಳಿಗೆ ವಿತರಿಸುತ್ತಿದ್ದಾರೆ. ಸಮೀಪದ ಮನೆ, ಹೋಟೆಲ್‌ಗಳಿಂದ ದೊರೆಯುವ ತರಕಾರಿ ತ್ಯಾಜ್ಯಗಳನ್ನು ಸಂಗ್ರಹಿಸಿ ಹಾಗೂ ಸ್ಥಳೀಯವಾಗಿ ತೋಟಗಳಿಂದ ಸಿಗುವ ಹುಲ್ಲು, ಸೊಪ್ಪು ತಂದು ಹಸುಗಳಿಗೆ ನೀಡುತ್ತಿದ್ದಾರೆ. ರಸ್ತೆ ಬದಿ ಹಾಗೂ ಪಾಳುಬಿದ್ದ ಜಾಗದಲ್ಲಿ ಹಸುಗಳನ್ನು ಮೇಯಿಸುತ್ತಾರೆ.

ಗೊಬ್ಬರ ಮಾರಾಟ: ಹಸುಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಶೇಖರಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಟ್ರ್ಯಾಕ್ಟರ್ ಒಂದಕ್ಕೆ 4 ರಿಂದ 5 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಾರ್ಷಿಕ 40 ರಿಂದ 50 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ತೋಟದ ಸಮೀಪದಲ್ಲಿ ಹಂದಿ ಸಾಕಣೆಯನ್ನೂ ಮಾಡುತ್ತಿದ್ದಾರೆ.