ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಮುಡುವಿನಹಳ್ಳಿ ಗ್ರಾಮದ ಪಿ.ಬಸವಣ್ಣ ಮತ್ತು ರತ್ನಮ್ಮ ದಂಪತಿ ಪುತ್ರ ಎಂ.ಬಿ.ಬಸವರಾಜು ತಮ್ಮ 15 ಎಕರೆ ಜಮೀನಿನಲ್ಲಿ ಸಮಗ್ರ ಹಾಗೂ ಆರ್ಗ್ಯಾನಿಕ್ ಪದ್ಧತಿ ಮೂಲಕ ಕೃಷಿ ಮಾಡಿ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಮತ್ತು ಪಚ್ಚ ಬಾಳೆ, ನಾಲ್ಕು ಎಕರೆ ಜಮೀನಿನಲ್ಲಿ ಹೊಗೆಸೊಪ್ಪು, ಎರಡು ಎಕರೆ ಅರಿಶಿಣ, ಫಲ ಬಿಡುತ್ತಿರುವ 220 ತೆಂಗಿನ ಮರ, ಎಂಟು ಮಾವು, 10 ಸಪೋಟ, 100 ಗಿಡ ಕಾಳುಮೆಣಸು, 100 ಕಾಫಿ ಗಿಡ, ನಿಂಬೆ, ನುಗ್ಗೆ, ಅಗಸೆ, 800 ಅಡಕೆ ಗಿಡ, 300 ಸಿಲ್ವರ್, 5 ಬಟರ್ ಫ್ರೂಟ್, 150 ತೇಗದ ಮರ ಹಾಕಿಕೊಂಡಿದ್ದಾರೆ. ಜತೆಗೆ 3 ಮಿಶ್ರತಳಿ ರಾಸುಗಳನ್ನು ಸಾಕುತ್ತಿದ್ದು, ವಾರ್ಷಿಕವಾಗಿ 25 ಲಕ್ಷ ರೂ.ಗೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
220 ತೆಂಗಿನ ಮರಗಳಿಂದ 5 ಲಕ್ಷ ರೂ., ಏಲಕ್ಕಿ ಬಾಳೆ 4 ಲಕ್ಷ, ಪಚ್ಚ ಬಾಳೆ 4 ಲಕ್ಷ, ಹೊಗೆ ಸೊಪ್ಪು 6 ಲಕ್ಷ, ಅರಿಶಿಣ 6 ಲಕ್ಷ ರು. ಸೇರಿದಂತೆ ಹಲವು ವಿವಿಧ ಬೆಳೆಗಳಿಂದ 25 ಲಕ್ಷ ರೂ.ಗೂ ಹೆಚ್ಚಿನ ಆದಾಯವನ್ನು ವಾರ್ಷಿಕವಾಗಿ ಗಳಿಸುತ್ತಿದ್ದಾರೆ.
ಬಸವರಾಜು ತಮ್ಮ ಜಮೀನಿಗೆ ಶೇ.99ರಷ್ಟು ಹಸಿರೆಲೆ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಒಂದು ಬೆಳೆ ಮುಗಿದ ಬಳಿಕ ಆ ಜಮೀನನ್ನು ಖಾಲಿ ಬಿಡದೆ ಅಲಸಂದೆ, ವೆಲ್ವೆಟ್ ಬೀನ್ಸ್, ಅಗಸೆ ಸೇರಿದಂತೆ ಹಲವು ಬೀಜಗಳನ್ನು ಜಮೀನಿಗೆ ಚೆಲ್ಲಿ ಬೆಳೆದ ನಂತರ ಟ್ರ್ಯಾಕ್ಟರ್ ಮೂಲಕ ಮಲ್ಚಿಂಗ್ ಮಾಡಿ ಭೂಮಿಗೆ ಸೇರಿಸುವ ಮೂಲಕ ಫಲವತ್ತತೆಯನ್ನು ಹೆಚ್ಚಿಸುತ್ತಾರೆ. ಈ ರೀತಿಯ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಬೆಳೆಗಳು ಉತ್ತಮ ಇಳುವರಿ ನೀಡುತ್ತವೆ. ಜತೆಗೆ ಖರ್ಚು ಕೂಡ ಕಡಿಮೆಯಾಗುತ್ತದೆ. ಹಾಗೆ ಬೆಳೆಗಳನ್ನು ಹಾಕಿದ ನಂತರ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಆರ್ಗ್ಯಾನಿಕ್ ಗೊಬ್ಬರವನ್ನು ಹಾಕಿ ಬೆಳೆ ಬೆಳೆಯುತ್ತಾರೆ.
ತಮ್ಮ 15 ಎಕರೆ ಜಮೀನಿಗೆ ಉಳುಮೆ ಮಾಡಲು ಸ್ವಂತ ಮಿನಿ ಟ್ರಾೃಕ್ಟರ್ ಹೊಂದಿದ್ದಾರೆ. ಉಳುಮೆ ಮಾಡಲು ಒಬ್ಬ ಡ್ರೈವರ್ ಇರಿಸಿಕೊಂಡಿದ್ದಾರೆ. ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಜತೆಗೆ ರಾಸುಗಳಿಗೆ ಅವಶ್ಯಕತೆ ಇರುವ ಮೇವಿನ ತಳಿಗಳು, ಮುಸುಕಿನ ಜೋಳ ಹಾಕಿಕೊಂಡಿದ್ದು, ಜಮೀನಿಗೆ ಕಾವಲು ಕಾಯಲು ಸೋಲಾರ್ ಸಿಸಿಟಿವಿ ಕ್ಯಾಮರಾ ಕೂಡ ಅಳವಡಿಸಿಕೊಂಡಿದ್ದಾರೆ. ಇದರಿಂದ ರಾತ್ರಿ ವೇಳೆ ಕಾಡುಪ್ರಾಣಿಗಳ, ಕಳ್ಳರ ಹಾವಳಿ ತಪ್ಪಿಸಲು ಅನುಕೂಲವಾಗಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಇಂದಿನ ದಿನಮಾನಗಳಲ್ಲಿ ರೈತರು ಸಾಕಷ್ಟು ಬೆಳೆಗಳನ್ನು ಬೆಳೆಯುತ್ತಿದ್ದರೂ ನಷ್ಟ ಉಂಟಾಗುತ್ತದೆ. ಆದರೆ ಎಂ.ಬಿ.ಬಸವರಾಜು ಕಡಿಮೆ ಖರ್ಚಿನ ಮೂಲಕ ಹೆಚ್ಚಿನ ಬೆಳೆಗಳನ್ನು ಬೆಳೆದು ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.